ಮೂಲಸೌಕರ್ಯ ಅಭಿವೃದ್ಧಿಗೆ ಮೊದಲ ಆದ್ಯತೆ: ತುಕಾರಾಂ

| Published : Jun 28 2025, 12:18 AM IST

ಸಾರಾಂಶ

ಸಂಸದ ಈ. ತುಕಾರಾಂ ಹಾಗೂ ಶಾಸಕಿ ಈ. ಅನ್ನಪೂರ್ಣ ತುಕಾರಾಂ ತಾಲೂಕಿನ ಕೃಷ್ಣಾನಗರದಲ್ಲಿನ ಸಂಸದ ಹಾಗೂ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿವಿಧ ಪರಿಕರ ವಿತರಿಸಿದರು.

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪರಿಕರಗಳ ವಿತರಣೆ ಮಾಡಿದ ಸಂಸದಕನ್ನಡಪ್ರಭ ವಾರ್ತೆ ಸಂಡೂರು

ಸಂಸದ ಈ. ತುಕಾರಾಂ ಹಾಗೂ ಶಾಸಕಿ ಈ. ಅನ್ನಪೂರ್ಣ ತುಕಾರಾಂ ತಾಲೂಕಿನ ಕೃಷ್ಣಾನಗರದಲ್ಲಿನ ಸಂಸದ ಹಾಗೂ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿವಿಧ ಪರಿಕರ ವಿತರಿಸಿದರು.

ವಿತರಣೆಯಾದ ಪರಿಕರಗಳ ವಿವರ:

ಅರಣ್ಯ ಇಲಾಖೆಯಿಂದ ಎಂಎಸ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ಯೋಜನೆ ಅಡಿ ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೨೦ ಫಲಾನುಭವಿಗಳಿಗೆ ಗ್ಯಾಸ್ ಸಿಲೆಂಡರ್, ಜಿಲ್ಲಾ ವಿಕಲಚೇತನರ ಇಲಾಖೆಯ ಅಡಿಪ್ ಯೋಜನೆ ಅಡಿಯಲ್ಲಿ ೭೦ ವಿಕಲಚೇತನ ಫಲಾನುಭವಿಗಳಿಗೆ ಮೂರು ಗಾಲಿಯ ಸೈಕಲ್ ಸೇರಿದಂತೆ ವಿವಿಧ ಪರಿಕರಗಳು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ೨೦ ಫಲಾನುಭವಿಗಳಿಗೆ ಪಂಪ್‌ಸೆಟ್, ಮೋಟಾರ್‌ಗಳು, ಸಣ್ಣ ನೀರಾವರಿ ಇಲಾಖೆಯ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆ ಅಡಿಯಲ್ಲಿ ೬೦ ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪಂಪ್, ಮೊಟಾರ್ ಮತ್ತಿತರ ಪರಿಕರಗಳು, ಮೀನುಗಾರಿಕೆ ಅಭಿವೃದ್ದಿ ಯೋಜನೆ ಅಡಿಯಲ್ಲಿ ೩೫ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೀನುಗಾರಿಕೆ ಪರಿಕರ ವಿತರಿಸಿದರು.

ನಂತರದಲ್ಲಿ ಸಂಸದರು ಹಾಗೂ ಶಾಸಕರು ಪಟ್ಟಣದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ವಸತಿ ನಿಲಯ ಹಾಗೂ ಸಿದ್ದಾಪುರ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ, ಸಿದ್ದಾಪುರ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಸಂಸದ ಈ. ತುಕಾರಾಂ, ಫಲಾನುಭವಿಗಳು ತಮಗೆ ದೊರೆತ ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ಶಾಸಕಿ ಈ. ಅನ್ನಪೂರ್ಣ ತುಕಾರಾಂ ಮಾತನಾಡಿದರು. ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ. ಲತಾ, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರೇಣುಕಾಚಾರ್ಯಸ್ವಾಮಿ, ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ. ವೀರೇಶ್, ಉಪಾಧ್ಯಕ್ಷ ಯರಿಸ್ವಾಮಿ, ಮುಖಂಡರಾದ ಕೆ. ಸತ್ಯಪ್ಪ, ಜೆ.ಎಂ. ಶಿವಪ್ರಸಾದ್, ಆಶಾಲತಾ ಸೋಮಪ್ಪ, ಶೈಲಜಾ ನಿಕ್ಕಂ, ಸಾಧನಾ ಬೋಯಿಟೆ, ವಿವಿಧ ಇಲಾಖೆ ಅಧಿಕಾರಿಗಳು, ಎಂ.ಎಸ್.ಪಿ.ಎಲ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.