ಸಾರಾಂಶ
ಬಾಗಲಕೋಟೆ : ಯಾವ ಉದ್ದೇಶದಿಂದ ಯುದ್ಧ ಆರಂಭಿಸಿದ್ರು, ಆ ಉದ್ದೇಶ ಈಡೇರಿದಿಯಾ? ಅಮೆರಿಕ ಹೇಳಿದರು ಅಂತೇಳಿ ಯುದ್ಧ ನಿಲ್ಲಿಸಿದರಲ್ಲ, ಹಾಗಾದ್ರೆ ನಿಮ್ಮ ಉದ್ದೇಶ ಈಡೇರಿದಿಯಾ? ಇದಕ್ಕೆ ನೀವು (ಪ್ರಧಾನಿ) ಉತ್ತರ ಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತ-ಪಾಕ್ ಯುದ್ಧದ ಕದನ ವಿರಾಮ ಘೋಷಣೆ ಹಿನ್ನೆಲೆಯಲ್ಲಿ ಆದಂಪುರ ಏರ್‌ಬೇಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕುರಿತು ಮಾತನಾಡಿದ ಅವರು, ಇದನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳುವುದು ಯಾರಿಗೂ ತರವಲ್ಲ ಎಂದರು.
ನಾಲ್ಕೇ ದಿನಕ್ಕೆ ಕದನ ವಿರಾಮ ಘೋಷಣೆ ಮಾಡುವ ಹಾಗಿದ್ರೆ, ಯುದ್ಧ ಪ್ರಾರಂಭ ಮಾಡಿದ್ದಾದ್ರೂ ಯಾಕೆ? ಕದನ ಆರಂಭಕ್ಕೂ ಮುಂಚೆ ನೀವು ಹೇಳಿದ್ದು, ಇನ್ಯಾವತ್ತು ನಮ್ಮ ತಂಟೆಗೆ ಪಾಕ್ ಬರಬಾರದು. ಆ ರೀತಿ ಪಾಠ ಕಲಿಸ್ತೀವಿ ಅಂತ ಹೇಳಿದ್ರಿ. ಪಾಕಿಸ್ತಾನದವರು ನೋಡಿದ್ರೆ ತಮ್ಮದೇ ಮೇಲುಗೈ ಆಗಿದೆ ಅಂತೇಳಿ ಹೇಳುತ್ತಿದ್ದಾರೆ. ಹಾಗಾದರೆ ಯುದ್ಧಕ್ಕೆ ಹೋಗಿ ನಾವೇನು ಸಾಧನೆ ಮಾಡಿದೆವು ಅನ್ನೋದನ್ನ ಪ್ರಧಾನಿಯವರು ಹೇಳಬೇಕು ಎಂದು ಆಗ್ರಹಿಸಿದರು.
ಕದನಕ್ಕೆ ಹೋಗುವುದೇ ಆಗಲಿ, ವಾಪಸ್ ತೆಗೆದುಕೊಳ್ಳುವುದೇ ಆಗಲಿ, ಇದನ್ನು ನಾವು ನಿರ್ಧಾರ ಮಾಡಬೇಕು. ನಮ್ಮ ದೇಶದ ಹಿತ ಮುಖ್ಯ, ಅಮೆರಿಕದವರು ಹೇಳಿದ್ರು ಅಂತೇಳಿ ಹಿಂದೆ ಸರಿಯೋದು, ನಮ್ಮ ದೇಶದ ಹಿತವೇ ಅಥವಾ ಯಾರ ಹಿತಕ್ಕಾಗಿ ಹಿಂದೆ ಸರಿದ್ರಿ? ಕಾಶ್ಮೀರ ವಿಷಯದಲ್ಲಿ ಅಮೆರಿಕದವ್ರು ನಾವು ಮಧ್ಯಸ್ಥಿಕೆ ವಹಿಸುತ್ತೇವೆ ಅಂತಾರೆ. ಹಾಗಾದರೆ ಕಾಶ್ಮೀರ ಸಮಸ್ಯೆ ಏನು ಅಂತಾರಾಷ್ಟ್ರೀಯ ಸಮಸ್ಯೆಯೇನು? ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹೌದೋ ಇಲ್ವೊ? ಅಮೆರಿಕದವರು ನಾವು ಮಧ್ಯಸ್ಥಿಕೆ ವಹಿಸ್ತಿವಿ ಅಂತಿದಾರೆ. ಹಾಗಾದರೆ ನೀವು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅನ್ನೋದನ್ನು ಕೈ ಬಿಟ್ಟು ವಿವಾದಿತ ಜಾಗೆ ಅಂತೇಳಿ ಒಪ್ಪಿಕೊಂಡಂಗೆ ಆಗುತ್ತದೆ. ಇದಕ್ಕೆ ಕಾರಣ ಯಾರು? ಯಾಕ್ ಹೀಗೆ ಆಯ್ತು ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆ ಮಾಡಿದರು.