ಸಾರಾಂಶ
ಹಾವೇರಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಪ್ರಕ್ಷುಬ್ದ ವಾತಾವರಣ ಹಿನ್ನೆಲೆ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣ ಬಳಿ ಇರುವ ಗ್ರಾಸಿಂ ಇಂಡಸ್ಟ್ರೀಸ್ ಕಾರ್ಖಾನೆ ಆವರಣದಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಬುಧವಾರ ಮಾಕ್ ಡ್ರಿಲ್ ನಡೆಸಲಾಯಿತು. ಯುದ್ಧ ಹಾಗೂ ವಿಕೋಪದ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗೃಹ ಇಲಾಖೆಗಳ ಆದೇಶ ಹಿನ್ನೆಲೆ ರೆಯಾನ್ ಗ್ರೇಡ್ ಫೈಬರ್ ಉತ್ಪಾದನೆ ಮಾಡುವ ಗ್ರಾಸಿಂ ಕಾರ್ಖಾನೆಯಲ್ಲಿ ನಡೆದ ಅಣುಕು ಪ್ರದರ್ಶನ ಗಮನ ಸೆಳೆಯಿತು. ಪಾಕಿಸ್ತಾನ ಸೇರಿದಂತೆ ಶತ್ರು ರಾಷ್ಟ್ರಗಳಿಂದ ಯಾವುದೇ ಸಂದರ್ಭದಲ್ಲಿ ದಾಳಿಯಾದರೆ ಹೇಗೆ ರಕ್ಷಣಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಬೇಕು? ಕಾರ್ಖಾನೆಗಳಲ್ಲಿ ವಿಷಾನಿಲಗಳಾದ ಗಂಧಕದ ಡೈ ಆಕ್ಸೈಡ್, ಕ್ಲೋರಿನ್ ಸಂಗ್ರಹಣೆ ಇದ್ದು ಶತ್ರು ರಾಷ್ಟ್ರಗಳಿಂದ ಬಾಂಬ್ ದಾಳಿಯಾದಾಗ ವಿಷಾನಿಲಗಳಿಂದ ಮತ್ತಷ್ಟು ಜೀವಹಾನಿಗಳಾಗಬಹುದು. ಆಗ ಹೇಗೆ ಸ್ಪಂದಿಸಬೇಕು ಎಂಬ ಅರಿವು ಮೂಡಿಸಲಾಯಿತು.ಕಾರ್ಖಾನೆ ಬಳಿ ವಿಷಾನಿಲ ಗಾಳಿಯಲ್ಲಿ ಸೇರಿ ವಾತಾವರಣವೇ ಹದಗೆಟ್ಟು ಸಾವು, ನೋವು ಸಂಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ತುರ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯ, ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬ ಬಗ್ಗೆ ಮಾಕ್ ಡ್ರಿಲ್ ಮೂಲಕ ಮಾಹಿತಿ ನೀಡಲಾಯಿತು.ಈ ವೇಳೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಣಕು ಪ್ರದರ್ಶನದ ನೇತೃತ್ವ ವಹಿಸಿದ್ದರು. ಎಸ್ಪಿ ಅಂಶುಕುಮಾರ, ಎಡಿಸಿ ಡಾ. ಎಲ್. ನಾಗರಾಜ, ಎಸಿ ಚನ್ನಪ್ಪ, ರಾಣಿಬೆನ್ನೂರ ಸಿಪಿಐ ಶಂಕರ, ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಗ್ರಾಸಿಂ ಕಾರ್ಖಾನೆ ಸಿಬ್ಬಂದಿ, ಕಾರ್ಮಿಕರು, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಎನ್‌ಸಿಸಿ ವಿದ್ಯಾರ್ಥಿಗಳು ಮಾಕ್ ಡ್ರಿಲ್‌ನಲ್ಲಿ ಪಾಲ್ಗೊಂಡಿದ್ದರು.
ಬಾಂಬ್ ದಾಳಿಯ ಸನ್ನಿವೇಶ: ಅಣಕು ಪ್ರದರ್ಶನ ನೀಡುವ ಉದ್ದೇಶದಿಂದ ಮೊದಲು ಫ್ಯಾಕ್ಟರಿ ಮೇಲೆ ಬಾಂಬ್ ದಾಳಿ ನಡೆದಿರುವ ಸನ್ನಿವೇಶ ಸೃಷ್ಟಿಸಲಾಯಿತು. ನಂತರ ಬಾಂಬ್ ದಾಳಿಯಿಂದ ಫ್ಯಾಕ್ಟರಿಯಲ್ಲಿದ್ದ ವಿಷ ಅನಿಲ ಕ್ಲೋರಿನ್ ಮತ್ತು ಗಂಧಕದ ಡೈಆಕ್ಸೈಡ್ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದ ನಂತರ ಫ್ಯಾಕ್ಟರಿ ಸಿಬ್ಬಂದಿ ಬಾಂಬ್ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ, ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸುವ ಮೂಲಕ ಜನರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡುವ ಬಗ್ಗೆ ಅಣಕು ಪ್ರದರ್ಶಿಸಲಾಯಿತು.ಜಿಲ್ಲೆಯ ನಗರ ಪ್ರದೇಶಗಳಲ್ಲಿ ಬ್ಲ್ಯಾಕ್ ಔಟ್ಹಾವೇರಿ: ಭಾರತ ಮತ್ತು ಪಾಕ್ ಮಧ್ಯೆ ಯುದ್ಧದ ಸನ್ನಿವೇಶ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ವಿವಿಧ ಪಟ್ಟಣ, ನಗರ ಪ್ರದೇಶಗಳಲ್ಲಿ ಬುಧವಾರ ರಾತ್ರಿ ಬ್ಲ್ಯಾಕ್ ಔಟ್ ನಡೆಸಲಾಯಿತು.ಹಾವೇರಿ ನಗರ, ಶಿಗ್ಗಾಂವಿ, ರಾಣಿಬೆನ್ನೂರು ನಗರಗಳಲ್ಲಿ ರಾತ್ರಿ 8 ಗಂಟೆಯಿಂದ 8.15ರವರೆಗೆ ಸಂಪೂರ್ಣ ಕತ್ತಲು ಆವರಿಸಿತು. ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಿದಂತೆ ಸರಿಯಾಗಿ 8 ಗಂಟೆಯಾಗುತ್ತಿದ್ದಂತೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಯಿತು. ಅಂಗಡಿ ಮುಂಗಟ್ಟು, ಮನೆಗಳ ಇನ್ವರ್ಟರ್, ದೀಪಗಳನ್ನು ಆರಿಸಿ ಸಾರ್ವಜನಿಕರು ಬ್ಲ್ಯಾಕ್ ಔಟ್ ನಡೆಸಿದರು.