ಸಾರಾಂಶ
ಬಾಗಲಕೋಟೆ : ದೇಶದಲ್ಲಿ ಪೆಹಲ್ಗಾಂ ರೀತಿ ದಾಳಿ ಆದ್ರೆ ಯಾರೂ ಸುಮ್ನೀರೋದಿಲ್ಲ. ಕೇಂದ್ರ ಸರ್ಕಾರ ಏನ್ ಮಾಡ್ತಿದೆ. ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಹಲ್ಗಾಂ ದಾಳಿ ವಿಷಯದಲ್ಲಿ ಮಾಡಿದ್ವಿ ಬಿಟ್ಟಿದ್ವಿ ಅನ್ನೋ ಹಂಗ ಆಗಬಾರ್ದು, ಪೂರ್ಣ ಮೆಟ್ಟಿಗೆ ಹಚ್ಚಬೇಕು, ಮೊದಲು ಪಿಒಕೆ ಖಾಲಿ ಮಾಡಿಸ್ಬೇಕು, ಅನ್ಯ ದೇಶದವರನ್ನ ಹೊರಗ ಹಾಕಬೇಕು, ಕೇಂದ್ರ ಸರ್ಕಾರ ಯುದ್ಧ ವಿಷಯದಲ್ಲಿ ನಾವು ಅಂದುಕೊಂಡಷ್ಟು ಗೆರೆ ಕೊರೆದಿಲ್ಲ, ದೇಶ ಮುಖ್ಯ, ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಒಕೆ ವಶಪಡಿಸಿಕೊಳ್ಳಬೇಕು ಅಂತಾರೆ ಆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಲ್ಲ, ನಿಮ್ದೇನಿದೆ ಎಂದು ತಿಳೀತಿಲ್ಲ, ಜಪಾನ್ ದೇಶ ನೋಡಿ ನಾವು ಕಲಿಯಬೇಕು. ಒಂದಿಂಚು ಜಾಗ ಬಿಟ್ಟುಕೊಡಲ್ಲ ಅವ್ರು, ದುಡ್ಡು ಖರ್ಚು ಮಾಡಿ ಬಾರ್ಡರ್ ಫಿಕ್ಸ್ ಮಾಡಿಕೊಳ್ತಾರೆ, ನಮ್ಮಲ್ಲೇನೂ ಇಲ್ಲ, ಅವರು ಬರ್ತಾರೆ, ಇವರು ಬರ್ತಾರೆ ಟಿವಿಯಲ್ಲಿ ನೋಡ್ತೀವಿ, ದೇಶದ ಬಗ್ಗೆ ಇನ್ನೂ ಬಹಳ ಇಂಪ್ರೂ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಪಾಪ ಅಮಾಯಕರಿಗೆ ಗುಂಡು ಹಾರಿಸಿ ಕೊಂದಿದ್ದು ಬಹಳ ನೋವಿನ ಸಂಗತಿ. ಪಾಪ ಏನು ಕರ್ಮ ರೀ ಅವರದು, ಇರೋದೆಲ್ಲ ಕಾಶ್ಮೀರದಲ್ಲೇ ಇದೆ. ಇದ್ದವರನ್ನ ಒದ್ದು ಹೊರಗೆ ಹಾಕಬೇಕು ಎಂದರು.ಪಾಕಿಸ್ತಾನದ ಮಹಿಳೆಯರು ಭಾರತೀಯರನ್ನ ಮದುವೆಯಾಗ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಇಲ್ಲಿಯವರನ್ನ ಮದುವೆಯಾಗೋರು 90 ಪರ್ಸೆಂಟ್ ಜನರ ಉದ್ದೇಶವೇ ಬೇರೆಯಾಗಿರುತ್ತೆ, ಈ ದೇಶವನ್ನ ಏನಾದ್ರೂ ಮಾಡಬೇಕು ಅನ್ನೋರೆ ಇಲ್ಲಿಗೆ ಬರ್ತಾರೆ, ಬರಬೇಕಾದ್ರೆ ಏನಾದ್ರೂ ವಿಚಾರ ಇಟ್ಟುಕೊಂಡು ಬರ್ತಾರೆ.
ಅವರಿಗೆ ತಮ್ನದೆ ಆದ ನೆಟವರ್ಕ್ ಇದೆ, ಆ ನೆಟವರ್ಕ್ ಬಳಿಸ್ಕೊಂಡು ಇಲ್ಲಿಗೆ ಬರ್ಯಾರೆ, ಯಾಕಪ್ಪ, ನಮ್ಮ ದೇಶದಲ್ಲಿ ಹೆಣ್ಣು-ಗಂಡು ಸಿಗೋದಿಲ್ವಾ, ಅಲ್ಲಿಯವರನ್ನೇ ಯಾಕೆ ಮದುವೆ ಆಗ್ಬೇಕು. ಇವರಲ್ಲಿ 90 ಪರ್ಸೆಂಟ್ ಬೇಹುಗಾರಿಕೆ ನಡೆಯುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.ಬೆಂಗಳೂರಲ್ಲೇ ಕೂತು ಮೊನ್ನೆ ಒಬ್ಬಾಂವ ಮಾಹಿತಿ ಕೊಡಲಿಲ್ವಾ, ಅಂತವರು ಬರೋ ಅವಶ್ಯಕತೆ ಏನಿದೆ, ಅವರನ್ಯಾಕೆ ಇಟ್ಟುಕೋಬೇಕು, ಪಾಕಿಸ್ತಾನ ಟೆರಿರಿಸ್ಟ್ ಚಟುವಟಿಕೆ ಮಾಡ್ತಿರೋದ್ರಿಂದ ಅವರ ಜೊತೆ ಸಂಬಂಧ ಯಾಕೆ ಬೇಕು, ಯಾವುದೇ ಸರ್ಕಾರ ಇರಲಿ, ಸಂಬಂಧ ಇಟ್ಟುಕೊಳ್ಳೋದು ಬೇಡವೇ ಬೇಡ, ನಮ್ಮ ಇಂಟಿಲಿಜೆನ್ಸಿ ಫೇಲ್ ಇದೆ, ಏಜೆನ್ಸಿಯ ಕೆಲವರು ಗೊತ್ತಿದ್ದೂ ಸುಮ್ಮನಿರ್ತಾರೆ, ನಮ್ಮ ದೇಶದ ಜನ್ರ ಒಳ್ಳೆತನವೋ, ಮುಗ್ದತೆಯೋ ಗೊತ್ತಿಲ್ಲ, ನಮ್ಮಲ್ಲಿರೋರೆ ಹೊರಗಿನವರಿಗೆ ಮಾಹಿತಿ ಕೊಟ್ಟರೆ ಹೇಗೆ..? ಮಿಲಿಟರಿಯಲ್ಲಿರೋರು ಕಡ್ಡಾಯವಾಗಿ ತಮ್ಮ ಮದುವೆ ಬಗ್ಗೆ ಡಿಕ್ಲೇರ್ ಮಾಡಬೇಕು, ಹೇಳೋಕೆ ಹೋದ್ರೆ ಇಂತಹವು ಬಹಳ ಇವೆ ಎಂದರು.