ಶೀಬಿ ಅರಣ್ಯ ಭೂಮಿ ರಕ್ಷಣೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

| Published : May 04 2025, 01:36 AM IST

ಶೀಬಿ ಅರಣ್ಯ ಭೂಮಿ ರಕ್ಷಣೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರೂ ಸಹ ಈ ಅರಣ್ಯ ಪ್ರದೇಶವನ್ನು ಸಂರಕ್ಷಿಸಲು ಬೇಲಿ ಹಾಕುವ ಬಗ್ಗೆ ಪ್ರಸ್ತಾವನೆ ನೀಡಿದ್ದು, ಈ ಅರಣ್ಯ ಪ್ರದೇಶವು ಭೂ ಮಾಫಿಯಾದ ಪಾಲಾಗದಂತೆ ಉಳಿಸಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿ ಶೀಬಿ ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದು ಪಡಿಸಲು ಮತ್ತು ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಂಡು, ಅಮೂಲ್ಯವಾದ ಅರಣ್ಯ ಭೂಮಿಯನ್ನು ಸಂರಕ್ಷಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಸ್ಪಷ್ಟ ಸೂಚನೆ ನೀಡಿದರು.

ಶೀಬಿ ಅರಣ್ಯ ಪ್ರದೇಶಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ಅವರು, ಬೆಂಗಳೂರು- ಪುಣೆ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಅರಣ್ಯ ಭೂಮಿಗೆ ಭಾರೀ ಮೌಲ್ಯವಿದ್ದು, ಕೆಲವರು ಇದನ್ನು ಕಬಳಿಸಲು ಮತ್ತು ಒತ್ತುವರಿ ಮಾಡಲು ಯತ್ನಿಸುತ್ತಿದ್ದಾರೆ. ಹೀಗಾಗಿ ಅರಣ್ಯ ಸಿಬ್ಬಂದಿ ಕಟ್ಟೆಚ್ಚರದಿಂದ ಇರಬೇಕು ಎಂದು ನಿರ್ದೇಶನ ನೀಡಿದರು.

ಕೆಲವರು ನ್ಯಾಯಾಲಯದಲ್ಲಿ ಭೂಮಿಯ ಮಾಲೀಕತ್ವದ ಹೋರಾಟ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ಡಿನೋಟಿಫಿಕೇಷನ್ ಆಗದ ಹೊರತು, ಅರಣ್ಯ ಭೂಮಿ ಅರಣ್ಯವಾಗಿಯೇ ಉಳಿಯುತ್ತದೆ ಎಂದು ಹೇಳಿದರಲ್ಲದೆ, ಡಿನೋಟಿಫಿಕೇಷನ್ ಆಗದ ಈ ಅರಣ್ಯದಲ್ಲಿನ ಅಕ್ರಮ ಮಂಜೂರಾತಿ ರದ್ದುಪಡಿಸುವಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಭೂ ಮಾಫಿಯಾದವರು ಬಡವರನ್ನು ಮುಂದಿಟ್ಟುಕೊಂಡು ಬೆಲೆಬಾಳುವ ಭೂಮಿ ಕಬಳಿಸಲು ಯತ್ನಿಸುತ್ತಾರೆ. ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸುವವರ ವಿರುದ್ಧ ಹಾಗೂ ಅದಕ್ಕೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧವೂ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಕೃತಿ, ಪರಿಸರ, ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನಮ್ಮ ಸಂವಿಧಾನ ಸಾರುತ್ತದೆ. ಸರ್ವೋನ್ನತ ನ್ಯಾಯಾಲಯ ಕೂಡ ಹಲವು ಪ್ರಕರಣಗಳಲ್ಲಿ ಇದನ್ನೇ ಪುನರುಚ್ಛರಿಸಿದೆ. ಹೀಗಾಗಿ ಅರಣ್ಯ ಸಂರಕ್ಷಣೆಯ ಹೊಣೆ ಹೊತ್ತು ಅಧಿಕಾರಿಗಳು ಅರಣ್ಯ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.

ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರೂ ಸಹ ಈ ಅರಣ್ಯ ಪ್ರದೇಶವನ್ನು ಸಂರಕ್ಷಿಸಲು ಬೇಲಿ ಹಾಕುವ ಬಗ್ಗೆ ಪ್ರಸ್ತಾವನೆ ನೀಡಿದ್ದು, ಈ ಅರಣ್ಯ ಪ್ರದೇಶವು ಭೂ ಮಾಫಿಯಾದ ಪಾಲಾಗದಂತೆ ಉಳಿಸಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ವಕೀಲರಾದ ಸೂರ್ಯ ಮುಕುಂದರಾಜ್, ಮತ್ತಿತರರು ಹಾಜರಿದ್ದರು.