ಸಾರಾಂಶ
ಬಸವ ಜಯಂತಿ । ಸರ್ವ ಶರಣ ಸಮ್ಮೇಳನ । ವಿಜಯ್‌ಕುಮಾರ್‌ಗೆ ಸನ್ಮಾನ
ಕನ್ನಡಪ್ರಭ ವಾರ್ತೆ ದಾವಣಗೆರೆಬಸವಣ್ಣನವರು ನಿರ್ನಾಮ ಮಾಡಿದ್ದು ಮೌಢ್ಯತೆಯನ್ನು, ಅಜ್ಞಾನವನ್ನು, ಕಂದಾಚಾರವನ್ನು, ಯಾವುದೇ ಸಮಾಜವನ್ನು ದಿಕ್ಕು ತಪ್ಪಿಸುತ್ತದೆಯೋ ಅದೆಲ್ಲವನ್ನು ಕೂಡ ನಿರ್ನಾಮ ಮಾಡಿದರು. ನಿರ್ಮಾಣ ಮಾಡಿದ್ದು, ಎಲ್ಲರೂ ಒಂದಾಗಿ ಬಾಳುವುದು. ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನಿಗಳಾಗಬೇಕು ಎಂಬ ಅನೇಕ ವಿಚಾರಗಳನ್ನು ಬಿತ್ತಿದರು. ಆದರೆ ಇವತ್ತಿಗೂ ಕೂಡ ಆ ವಿಚಾರಗಳನ್ನು ಆಚಾರದಲ್ಲಿ ತರುವ ಗಟ್ಟಿತನ ಯಾರಿಗೂ ಇಲ್ಲ. ಅವರು ನುಡಿದಂತೆ ನಡೆದರು. ಅಲ್ಲದೆ ನಡೆದಂತೆ ನುಡಿದರು ಎಂದು ಸಾಣೇಹಳ್ಳಿ ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಕ್ಕರಗೋಳ ಗ್ರಾಮದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತ್ಯುತ್ಸವ ಹಾಗೂ ಸರ್ವ ಶರಣ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ಜನರಿಗೆ ಗುಡಿ ಕಟ್ಟೋದರಲ್ಲಿ, ಎಡೆ ಹಿಡಿಯೋದರಲ್ಲಿ, ಫೋಟೋ ಹಾಕಿಸಿಕೊಳ್ಳುವುದರಲ್ಲಿ ಇರುವ ಖುಷಿ, ಬಸವ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಇಲ್ಲ ಎಂದರು.ಬಸವಣ್ಣನವರು ನುಡಿದಂತೆ ನಡೆದವರು, ನಡೆದಂತೆ ನುಡಿದವರು, ನಡೆ-ನುಡಿ ನಡುವೆಯ ಇರುವ ಅಂತರವನ್ನು ತೋರಿಸಿದವರು. ಆಗಿನ ಸಮಾಜದಲ್ಲಿ ಅಲ್ಪ ಕಾಲದಲ್ಲೇ ಅದ್ಭುತವಾದ ಬದಲಾವಣೆ ತರಲು ಸಾಧ್ಯವಾಯಿತು. ಇವತ್ತಿಗೂ ಕೂಡ ಬಸವಣ್ಣನವರು ಹೇಳಿದಂತಹ ತತ್ವಾದರ್ಶಗಳನ್ನು ಜನರು ಆಚರಣೆಯಲ್ಲಿ ತರುವುದರಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ತಿಳಿಸಿದರು.
ದೇವಸ್ಥಾನ ಕಟ್ಟುವುದಕ್ಕೆ ನಾನು ಕೂಡ ಸಹಾಯ ಮಾಡಿದ್ದೇನೆ ಎಂದು ವಿನಯ್‌ಕುಮಾರ್ ಹೇಳಿದರು. ಇನ್ಮುಂದೆ ಯಾವುದೇ ಕಾರಣಕ್ಕೂ ದೇವಸ್ಥಾನ ಕಟ್ಟುವುದಕ್ಕೆ ಹಣ ಕೊಡಬಾರದು. ಅದರ ಬದಲಾಗಿ, ಶಾಲೆ ಕಟ್ಟುವುದಕ್ಕೆ, ಬಡ ಮಕ್ಕಳ ಶಿಕ್ಷಣಕ್ಕೆ, ಇನ್ನೂ ಒಳ್ಳೆಯ ಕಾರ್ಯಗಳಿಗೆ ಹಣವನ್ನು ಕೊಡಿ ಎಂದು ವಿನಯ್‌ಕುಮಾರ್‌ಗೆ ಕಿವಿಮಾತು ಹೇಳಿದರು.ಒಂದು ಊರಲ್ಲಿ ಎಷ್ಟು ದೇವಸ್ಥಾನಗಳ ಇವೆ. ಆ ದೇವಸ್ಥಾನಗಳು ಏನಾದರೂ ನಿಮಗೆ ದುಡಿಯುವುದನ್ನು ಕಲಿಸಿವೆಯೇ?, ದುಶ್ಚಟಗಳನ್ನು ತಪ್ಪಿಸಿವೆಯೇ?, ಬಸವಣ್ಣನವರು ಅಂದೇ ಹೇಳಿದ್ದರು. ಶ್ರೀಮಂತರಲ್ಲ ದೊಡ್ಡ ದೊಡ್ಡ ದೇವಸ್ಥಾನ ಕಟ್ಟಿಸುತ್ತಾರೆ. ನಾನು ಬಡವ, ನಾನೆಲ್ಲಿಂದ ಕಟ್ಟಿಸಲಿ ಎಂದು. ಹಾಗಾದರೆ ಬಸವಣ್ಣನವರು ಬಡವರೇನು?, ಆದರೆ ಬಸವಣ್ಣನವರು ದೇವಸ್ಥಾನಗಳನ್ನು ಕಟ್ಟುವ ಬದಲು ವೈಚಾರಿಕ ಚಿಂತನೆಗಳನ್ನು ಜನರ ಹೃದಯಗಳಲ್ಲಿ ಕಟ್ಟಿದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹೊಸದುರ್ಗ ಶಾಖಾಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ.ಬಸವ ಮಾಚೀದೇವ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೆ.ಜಿ.ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಇನ್‌ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್, ಡಾ.ನಾ.ಲೋಕೇಶ್ ಒಡೆಯರ್, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಸಿದ್ದಪ್ಪ, ಬಣಕಾರ ರೇವಣಸಿದ್ದಪ್ಪ, ಡಾ.ಹದಡಿ ಯಲ್ಲಪ್ಪ ಇತರರು ಇದ್ದರು.