ಸಾರಾಂಶ
ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಸಮಿತಿಗಳನ್ನು ಮುಂದಿನ 3 ತಿಂಗಳೊಳಗೆ ರಚಿಸಲು ನಿರ್ಧರಿಸಲಾಗಿದೆ.ಇಲ್ಲಿಯ ಪಾಲಿಕೆ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ‘ವಾರ್ಡ್ ಸಮಿತಿ ರಚನೆ’ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ಕುರಿತು ಸಭೆಯಲ್ಲಿ ಗಮನ ಸೆಳೆದ ಮಾಜಿ ಮೇಯರ್ ಈರೇಶ ಅಂಚಟಗೇರಿ ಮತ್ತು ಚಂದ್ರಶೇಖರ ಮನಗುಂಡಿ, ಅಧಿಕಾರಿಗಳು ವಾರ್ಡ್ ಸಮಿತಿ ರಚನೆ ವಿಚಾರದಲ್ಲಿ ಕಾಲಹರಣ ಮಾಡುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಾರ್ಡ್ ಸಮಿತಿ ರಚನೆ ಸಂಬಂಧಿಸಿದಂತೆ ಮೇಯರ್ ನೇತೃತ್ವದಲ್ಲಿ ಸದನ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಪೌರಾಡಳಿತ ಪರವಾನಗಿಗೆ ಸರ್ಕಾರವನ್ನು ಕೇಳಿದೆ. ಈ ಮೂಲಕ ಸಮಿತಿ ರಚನೆಗೆ ನಿರಾಸಕ್ತಿ ಮತ್ತು ಅನಗತ್ಯ ಕಾಲಹರಣ ಮಾಡಲಾಗುತ್ತಿದೆ ಎಂದು ಕಿಡಕಾರಿದರು.
ವಾರ್ಡ್ ಸಮಿತಿ ರಚನೆಗೆ ಇರುವ ಸಾರ್ವಜನಿಕರ ಸಹಭಾಗಿತ್ವದ ಕೊರತೆ ನೀಗಿಸಲು ಜಾಗೃತಿ ಮೂಡಿಸಿ ಈಗಿರುವ ಅರ್ಜಿಗಳನ್ನು ಇಟ್ಟುಕೊಂಡು ಸದನ ಸಮಿತಿ ವರದಿ ಅನುಸಾರ ಮತ್ತೊಮ್ಮೆ ಅರ್ಜಿ ಆಹ್ವಾನಿಸಿ ಅವುಗಳನ್ನು ಪರಿಶೀಲಿಸಿ ಮೂರು ತಿಂಗಳೊಳಗಾಗಿ ಸಮಿತಿ ರಚನೆಗೆ ಕ್ರಮವಹಿಸಬೇಕೆಂದು ಮೇಯರ್ ರಾಮಣ್ಣ ಬಡಿಗೇರ ಆದೇಶಿಸಿದರು.ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ಕೆಂಗಣ್ಣಿಗೆ ಪಾಲಿಕೆ ಗುರಿಯಾಗುವಂತಾಗಿದೆ. ಸಮಿತಿ ರಚನೆಯಲ್ಲಿ ನಿಯಮಾನುಸಾರವಾಗಿ ಎಸ್ಸಿ-ಎಸ್ಟಿ, ಒಬಿಸಿ ವರ್ಗ ಪಾಲಿಸಲು ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿಲ್ಲ. ಕೆಲವೊಂದು ವಾರ್ಡ್‌ಗಳಲ್ಲಿ ಕಡಿಮೆ ಅರ್ಜಿಗಳು ಬಂದಿರಬಹದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅರ್ಜಿ ಆಹ್ವಾನಿಸಿ ಅವುಗಳನ್ನು ನಿಯಮಾನುಸಾರ ಭರ್ತಿ ಮಾಡಿ ರಚನೆಗೆ ಕ್ರಮವಹಿಸಬೇಕೆಂದು ಈರೇಶ ಅಂಚಟಗೇರಿ ಒತ್ತಾಯಿಸಿದರು. ಇದಕ್ಕೆ ಮೇಯರ್ ರಾಮಣ್ಣ ರೂಲಿಂಗ್ ಮಾಡಿದರು.
ಬಿಆರ್‌ಟಿಎಸ್‌ಗೆ ಪ್ರತ್ಯೇಕ ಸಭೆ:ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಪಾಲಿಕೆ ಸದಸ್ಯರ ವಾಹನಗಳ ಸಂಚಾರಕ್ಕೆ ಮುಕ್ತ ನೀಡುವ ಕುರಿತು ಸೇರಿದಂತೆ ಬಿಆರ್‌ಟಿಎಸ್‌ನಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರವಾಗಿಯೇ ಪ್ರತ್ಯೇಕ ಸಭೆ ನಡೆಸಲು ಪಾಲಿಕೆ ಸಾಮಾನ್ಯಸಭೆಯಲ್ಲಿ ನಿರ್ಣಯಿಸಲಾಯಿತು. ಕಳೆದ ಸಭೆಯಲ್ಲಿ ಪಾಲಿಕೆ ಸದಸ್ಯರ ವಾಹನಗಳಿಗೂ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಸಂಚರಿಸಲು ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಈ ಬಗ್ಗೆ ಮುಂದುವರಿದ ಚರ್ಚೆಯಲ್ಲಿ ಬಿಆರ್‌ಟಿಎಸ್‌ನ ಅಧಿಕಾರಿಗಳನ್ನು ಕರೆಯಿಸಿ ಚರ್ಚೆಯಾಗಬೇಕು. ಅಂದಾಗ ಮಾತ್ರ ಈ ಸಮಸ್ಯೆಗೆ ಬಗೆಹರಿಯುತ್ತದೆ ಎಂದು ಸದಸ್ಯರು ಆಗ್ರಹಿಸಿದರು. ಬಳಿಕ ಬಿಆರ್‌ಟಿಎಸ್ ಎಇಇ ವಿಜಾಪುರ ಆಗಮಿಸಿ ಪ್ರತಿಕ್ರಿಯಿಸಲು ಮುಂದಾದರು. ಆದರೆ ಅದಕ್ಕೆ ಆಕ್ಷೇಪಿಸಿದ ಸದಸ್ಯರು, ನಿರ್ಣಯ ತೆಗೆದುಕೊಳ್ಳಬಹುದಾದ ಉನ್ನತ ಅಧಿಕಾರಿಗಳು ಬಂದರೆ ಮಾತ್ರ ಚರ್ಚೆ ನಡೆಸಿದ್ದು ಸಾರ್ಥಕವಾಗುತ್ತದೆ ಎಂದರು. ಬಳಿಕ ಮೇಯರ್ ರಾಮಣ್ಣ ಬಡಿಗೇರ್, ಶೀಘ್ರದಲ್ಲೇ ಬಿಆರ್‌ಟಿಎಸ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಿಗದಿಪಡಿಸುವುದಾಗಿ ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.
ಪಾಲಿಕೆ ವ್ಯಾಪ್ತಿಯಲ್ಲಿ 43 ಹಳ್ಳಿಗಳು ಸೇರಿವೆ. ಆದರೆ ಅಲ್ಲಿ ಮನೆ, ಕಟ್ಟಡ ಕಟ್ಟಲು ರೈತರು ಪರದಾಡುವಂತಾಗಿದೆ. ಪಾಲಿಕೆಯಿಂದ ಬಿಲ್ಡಿಂಗ್ ಪರವಾನಗಿ ಸಿಗುತ್ತಲೇ ಇಲ್ಲ ಎಂದು ವಿಷಯವನ್ನು ಸದಸ್ಯ ರಾಜಣ್ಣ ಕೊರವಿ ಪ್ರಸ್ತಾಪಿಸಿದರು.ಇದಕ್ಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಡಿಸಿ ಕನವರೇಷನ್ ಸೇರಿದಂತೆ ವಿವಿಧ ದಾಖಲೆಗಳು ಬೇಕಾಗುತ್ತದೆ. ಅಂದಾಗ ಮಾತ್ರ ಪರವಾನಗಿ ಕೊಡಲು ಸಾಧ್ಯ ಎಂದು ತಿಳಿಸಿದರು. ಅದಕ್ಕೆ ಆದರೆ ಅವುಗಳೆಲ್ಲ ಗಾಂವ ಠಾಣಾ ಎಂದಿರುತ್ತವೆ. ಅವುಗಳಿಗೆಲ್ಲ ಡಿಸಿ ಕನವರೇಷನ್ ಅದೆಲ್ಲ ಆಗಿರಲ್ಲ. ಆದರೆ ಅವರು ಮೂರ್ನಾಲ್ಕು ತಲೆಮಾರುಗಳಿಂದ ಅಲ್ಲೇ ವಾಸವಾಗಿರುತ್ತಾರೆ. ಹೀಗಾಗಿ ಪರವಾನಗಿ ಕೊಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕೊರವಿ ಒತ್ತಾಯಿಸಿದರು. ಇದಕ್ಕೆ ಉಮೇಶಗೌಡ ಕೌಜಗೇರಿ, ಚಂದ್ರಶೇಖರ ಮನಗುಂಡಿ ಸೇರಿದಂತೆ ಹಲವರು ಧ್ವನಿಗೂಡಿಸಿದರು.
ಬಳಿಕ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.