ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕು ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಮಾರ್ಪಡಿಸುವಂತೆ ಹಾಗೂ ನೂತನ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ಗೆ ಮಾಜಿ ಶಾಸಕ ಆರ್.ನರೇಂದ್ರ ಮನವಿ ಸಲ್ಲಿಸಿದರು.ಬೆಂಗಳೂರಿನ ವಿಧಾನಸೌಧದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿ, ನೂತನ ಹನೂರು ತಾಲೂಕು ಕೇಂದ್ರದಲ್ಲಿ ಕಳೆದ 20 ತಿಂಗಳ ಹಿಂದೆ ತಾಲೂಕು ಕೇಂದ್ರದಲ್ಲಿರುವ ಅಪರ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಸಂಚಾರಿ ನ್ಯಾಯಾಲಯ ಪ್ರಾರಂಭಿಸಿ ವಾರದಲ್ಲಿ ನಾಲ್ಕು ದಿನಗಳು ಕಾರ್ಯಕಲಾಪಗಳು ನಡೆಯುತ್ತಿತ್ತು. ತದನಂತರ ನ್ಯಾಯಾಧೀಶರು ವರ್ಗಾವಣೆಗೊಂಡ ನಂತರ ಸುಮಾರು ನಾಲ್ಕು ತಿಂಗಳು ಕಾಲ ನ್ಯಾಯಾಲಯದ ಕಾರ್ಯಕ್ರಮಗಳು ನಡೆಯದೆ ಕಕ್ಷಿದಾರರಿಗೆ ಸಾಕಷ್ಟು ತೊಂದರೆಯಾಗಿದೆ.
ಪ್ರಸ್ತುತ ತಾತ್ಕಾಲಿಕ ಸಂಚಾರಿ ನ್ಯಾಯಾಲಯವು ವಾರದ ಮೂರು ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹನೂರು ತಾಲೂಕು ವಿಸ್ತಾರವಾದ ತಾಲೂಕಾಗಿರುವುದರಿಂದ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿದೆ. ಶೀಘ್ರ ನ್ಯಾಯ ವಿತರಣೆಗಾಗಿ ಹನೂರು ಪಟ್ಟಣದ ಸಂಚಾರಿ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಅಧಿ ಸೂಚನೆ ಹೊರಡಿಸಬೇಕು, ಬಾಡಿಗೆ ಕಟ್ಟಡದಲ್ಲಿ ಕಾರ್ಯಕಲಾಪ ನಡೆಯುತ್ತಿರುವುದರಿಂದ ವಕೀಲರು ಹಾಗೂ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅತಿ ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.ಮನವಿ ಸ್ವೀಕರಿಸಿದ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಇನ್ನು ಒಂದು ತಿಂಗಳೊಳಗೆ ಕಾಯಂ ನ್ಯಾಯಾಲಯವನ್ನಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳುತ್ತೇನೆ. ನೂತನ ಕಟ್ಟಡ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೌದಳ್ಳಿ, ಬಂಡಳ್ಳಿ, ಚಿಗತಾಪುರ ಗ್ರಾಮಗಳ ಶಾದಿ ಮಹಲ್ ಮುಂದುವರೆದ ಕಾಮಗಾರಿಗೆ ತಲಾ 50 ಲಕ್ಷ ದೊಡ್ಡಿಂದುವಾಡಿ, ದಿನ್ನಳ್ಳಿ ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣ ಕಾಮಗಾರಿಗೆ ತಲಾ 50 ಲಕ್ಷ ನೀಡುವಂತೆ ವಸತಿ ಹಾಗೂ ವರ್ಕ್ ಸಚಿವರಾದ ಜಮೀರ್ ಅಹ್ಮದ್‌ಗೆ ಮನವಿ ಸಲ್ಲಿಸಿರುವುದಾಗಿ ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪರನ್ನು ಭೇಟಿಯಾಗಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ, ಮಧುವನಹಳ್ಳಿ, ಪೂಜಾರಿ ಬಾವಿದೊಡ್ಡಿ, ಬೆಳತ್ತೂರು, ಕಣ್ಣೂರು, ದೊಡ್ಡಿಂದುವಾಡಿ ಗ್ರಾಮಗಳ ಅಂಬೇಡ್ಕರ್ ಭವನ ನಿರ್ಮಾಣ ಮತ್ತು ಮುಂದುವರೆದ ಕಾಮಗಾರಿಗೆ ಎರಡು ಕೋಟಿ 30 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.ಈ ವೇಳೆ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಚಿ ರೋಹಿತ್ ಹಿರಿಯ ವಕೀಲರಾದ ನಾಗರಾಜು, ಪದಾಧಿಕಾರಿಗಳಾದ ಸಂಪತ್ ಕುಮಾರ್, ಪ್ರಕಾಶ್, ಪ್ರದೀಪ್ ನಾಯ್ಡು, ಅಬ್ದುಲ್ಲಾ ಹಾಜರಿದ್ದರು.