ಸಾರಾಂಶ
ಶಿವನೆಂದರೆ ಸತ್ಯ ಮತ್ತು ಸುಂದರ. ಈ ಸತ್ಯ ಮತ್ತು ಸುಂದರನಾಗಿರುವ ಶಿವನನ್ನು ಅರಿಯುವುದೇ ಶಿವಾನುಭವವಾಗಿದೆ
ನರೇಗಲ್ಲ: ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಣದ ಜತೆಗೆ ಸಾಹಿತ್ಯಿಕ, ಸಂಸ್ಕೃತಿಯ ಅಧ್ಯಯನ ಮಾಡುವುದರಿಂದ ನಮ್ಮ ಹಿರಿಕರು ಮಾಡಿದ ಸತ್ಕಾರ್ಯ ಅರಿಯಲು ಸಾಧ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಸ್ಥಳೀಯ ಶ್ರೀಅನ್ನದಾನೇಶ್ವರ ಮಂಟಪದಲ್ಲಿ ಜರುಗಿದ 58ನೇ ಶಿವಾನುಭವಗೋಷ್ಠಿಯಲ್ಲಿ ವಿದ್ಯಾರ್ಥಿ ಮತ್ತು ಸಾಹಿತ್ಯ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನ ಉತ್ತಮವಾಗಿರಬೇಕೆಂಬ ಮನಸ್ಸು ಹೊಂದಿದ್ದರೆ ಮೊದಲು ನಕರಾತ್ಮಕ ಭಾವನೆಗಳಿಂದ ದೂರವಿರಬೇಕು. ನಿಮ್ಮಲ್ಲಿ ಧನಾತ್ಮಕ ಭಾವನೆ, ಯೋಚನೆ ಬೆಳಸಿಕೊಂಡಾಗ ಉತ್ತಮ ವ್ಯಕ್ತಿತ್ವ, ಭವಿಷ್ಯ ಹೊಂದಲು ಸಾಧ್ಯ ಎಂದರು.ಶಿವನೆಂದರೆ ಸತ್ಯ ಮತ್ತು ಸುಂದರ. ಈ ಸತ್ಯ ಮತ್ತು ಸುಂದರನಾಗಿರುವ ಶಿವನನ್ನು ಅರಿಯುವುದೇ ಶಿವಾನುಭವವಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಈ ವಿಷಯದ ಉಪನ್ಯಾಸ ಏರ್ಪಡಿಸಿರುವುದು ಸ್ತುತ್ಯವಾದದ್ದು ಎಂದರು.
ಪಠ್ಯದೊಂದಿಗೆ ನಿಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿಮ್ಮಲ್ಲಿ ಮೊದಲು ಸಾಹಿತ್ಯದ ಅಭಿರುಚಿ ಬೆಳೆಯುತ್ತದೆ. ನಂತರ ನೀವೂ ಒಬ್ಬ ಬರೆಹಗಾರರಾಗುತ್ತೀರಿ. ನಿಮ್ಮ ಮನದಲ್ಲಿನ ಭಾವನೆ ನೀವು ನಿಮಗೆ ಬೇಕಾದ ರೀತಿಯಲ್ಲಿ ವ್ಯಕ್ತಪಡಿಸಬಹುದು. ಕಥೆ, ಕವನ, ಚುಟುಕು, ಕಾದಂಬರಿ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ನೀವುಗಳು ಪರಿಣಿತಿ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೊದಲು ನೀವು ನಿಮ್ಮಲ್ಲಿನ ಆಸಕ್ತಿ ಕ್ಷೇತ್ರ ಆಯ್ದುಕೊಳ್ಳಿರಿ. ಸಾಹಿತ್ಯ ಓದುವದರಿಂದ ನೀವೊಬ್ಬ ಒಳ್ಳೆಯ ವಾಗ್ಮಿಯೂ ಆಗಬಹುದು. ಸಾಹಿತ್ಯ ಮನುಷ್ಯನನ್ನು ನಕಲಿನಿಂದ ದೂರ ಸರಿಸಿ ಅವನಲ್ಲಿ ಸ್ವಂತಿಕೆ ಬೆಳೆಸಲು ಸಹಾಯ ಮಾಡುತ್ತದೆ ಎಂದರು.ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವ ಎಂದಿಗೂ ಅಂಕಗಳ ಮೇಲೆ ನಿರ್ಧಾರವಾಗುವುದಿಲ್ಲ. ಬದಲಾಗಿ ಅವನ ಸ್ವಂತಿಕೆ ಅವನಿಗೊಂದು ವ್ಯಕ್ತಿತ್ವ ಒದಗಿಸಿಕೊಡುತ್ತದೆ. ಹತ್ತರಲ್ಲಿ ಹನ್ನೊಂದಾಗಿ ನೀವುಗಳು ಬೆಳೆಯುವ ಬದಲಾಗಿ ಸ್ವಂತಿಕೆ ಬೆಳೆಸಿಕೊಂಡು ವಿದ್ಯಾರ್ಥಿಯ ದೆಸೆಯಿಂದಲೆ ನೀವುಗಳು ಸಾಹಿತ್ಯದ ಒಲವನ್ನು ಬೆಳೆಸಿಕೊಂಡು ಮುಂದೆ ಮಹೋನ್ನತ ವ್ಯಕ್ತಿಗಳಾಗಿರಿ ಎಂದು ತಿಳಿಸಿದರು.
ಈ ವೇಳೆ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಿಗಿ, ಕಸಾಪ ಕೋಶಾಧ್ಯಕ್ಷ ಹೆದ್ದೂರಿ, ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ, ಉಪನ್ಯಾಸಕ ಎಫ್.ಎನ್. ಹುಡೇದ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ, ಶಿಕ್ಷಕ ಸುರೇಶ ಹಳ್ಳಿಕೇರಿ, ಜೆ.ಎ. ಪಾಟೀಲ ಮುಂತಾದವರಿದ್ದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಶಿಕ್ಷಕ ಆರ್.ಕೆ. ಬಾಗವಾನ ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಂ. ಹಾದಿಮನಿ ವಂದಿಸಿದರು.