ಸಾರಾಂಶ
ಮುಂಡಗೋಡ: ಮಾಜಿ ಶಾಸಕ ವಿ.ಎಸ್. ಪಾಟೀಲ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ತಾಲೂಕಿನ ಹಾರವಳ್ಳಿ ಬಳಿ ಶುಕ್ರವಾರ ನಡೆದಿದೆ.
ಮಹಾಶಿವರಾತ್ರಿ ಪ್ರಯುಕ್ತ ಬನವಾಸಿ ಮಧುಕೇಶ್ವರ ದೇವಾಲಯಕ್ಕೆ ಹೋಗಿ ದರ್ಶನ ಪಡೆದು ತಮ್ಮ ಕಾರಿನಲ್ಲಿ ವಾಪಸ್ ತಮ್ಮ ಸ್ವಗ್ರಾಮ ಅಂದಲಗಿಗೆ ತೆರಳುವಾಗ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದುಕೊಂಡಿದೆ.
ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಶಾಸಕ ವಿ.ಎಸ್. ಪಾಟೀಲ ಹಾಗೂ ಚಾಲಕ ಆನಂದ ಆಲೂರಗೆ ಸಣ್ಣಪುಟ್ಟ ಪೆಟ್ಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸದ್ಯ ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.ದೇವರ ದರ್ಶನ ಪಡೆದು ಮನೆಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಸಣ್ಣ ಪುಟ್ಟ ಪೆಟ್ಟಾಗಿದ್ದು, ಯಾವುದೇ ರೀತಿ ಅಪಾಯವಾಗಿಲ್ಲ.
ನಾನು ಕ್ಷೇಮವಾಗಿದ್ದೇನೆ ಯಾರು ಕೂಡ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.