ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮುಂಬರುವ ಶೈಕ್ಷಣಿಕ ಸಾಲಿನಿಂದ ಪಠ್ಯ-ಪುಸ್ತಕಗಳ ಜೊತೆಗೆ ನೋಟ್‌ಬುಕ್‌ಗಳನ್ನೂ ಉಚಿತವಾಗಿ ವಿತರಿಸುವುದಾಗಿ ಮುಖ್ಯಮಂತ್ರಿ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಇದರ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮುಂಬರುವ ಶೈಕ್ಷಣಿಕ ಸಾಲಿನಿಂದ ಪಠ್ಯ-ಪುಸ್ತಕಗಳ ಜೊತೆಗೆ ನೋಟ್‌ಬುಕ್‌ಗಳನ್ನೂ ಉಚಿತವಾಗಿ ವಿತರಿಸುವುದಾಗಿ ಮುಖ್ಯಮಂತ್ರಿ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಇದರ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.
46 ಸಾವಿರ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗಿನ ಸುಮಾರು 38 ಲಕ್ಷ ಮಕ್ಕಳಿಗೆ ನೋಟ್ ಬುಕ್ ವಿತರಿಸಲು ಅಂದಾಜು 24 ಕೋಟಿ ರು. ಅನುದಾನ ಬೇಕಾಗುತ್ತದೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳಿಗೆ ಬೇಡಿಕೆ (ಇಂಟೆಂಟ್) ಸಲ್ಲಿಸುವಾಗ ಜೊತೆಯಲ್ಲೇ ನೋಟ್ ಬುಕ್‌ಗಳಿಗೂ ಬೇಡಿಕೆ ಪಡೆಯಲು ಇಲಾಖೆ ನಿರ್ಧರಿಸಿದೆ.
ಕೆಟಿಬಿಎಸ್ ಮೂಲಕವೂ ನೋಟ್‌ಬುಕ್‌ಗಳನ್ನು ಪೂರೈಸಲಾಗುವುದು
ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (ಕೆಟಿಬಿಎಸ್) ಮೂಲಕವೂ ನೋಟ್‌ಬುಕ್‌ಗಳನ್ನು ಪೂರೈಸಲಾಗುವುದು. ಶಾಲೆಗಳು ಪಠ್ಯಪುಸ್ತಕಗಳ ಜೊತೆಗೆ ನೋಟ್‌ಬುಕ್‌ಗಳ ಇಂಡೆಂಟ್ ಅನ್ನು ಸಲ್ಲಿಸಬೇಕಾಗುತ್ತದೆ ಎಂದು ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕ್ಕಳ ದಾಖಲಾತಿ ಮಾತ್ರ ವರ್ಷದಿಂದ ವರ್ಷಕ್ಕೆ ಇಳಿಕೆ
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ರಾಗಿ ಮಾಲ್ಟ್ ಮಿಶ್ರಿತ ಹಾಲು, ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆದರೂ, ಮಕ್ಕಳ ದಾಖಲಾತಿ ಮಾತ್ರ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಲೇ ಇದೆ. 10 ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದ ಮಕ್ಕಳ ಸಂಖ್ಯೆ 50 ಲಕ್ಷಕ್ಕೂ ಹೆಚ್ಚಿತ್ತು. ಆದರೆ, ಈಗ 38 ಲಕ್ಷಕ್ಕೆ ಇಳಿದಿದೆ. ದಾಖಲಾತಿ ಹೆಚ್ಚಿಸಲು ಈ ಬಾರಿ ನವೆಂಬರ್ ತಿಂಗಳಿಂದಲೇ ದಾಖಲಾತಿ ಜಾಗೃತಿ ಅಭಿಯಾನ ನಡೆಸಲು ಇಲಾಖೆ ಎಲ್ಲಾ ಜಿಲ್ಲಾ ಡಿಡಿಪಿಐ, ಬಿಇಒಗಳು ಮತ್ತು ಶಾಲಾ ಶಿಕ್ಷಕರಿಗೆ ಸೂಚನೆ ನೀಡಿದೆ. ಉಚಿತ ನೋಟ್ ಬುಕ್ ವಿತರಣೆ ಕೂಡ ಕುಸಿಯುತ್ತಿರುವ ದಾಖಲಾತಿ ಹೆಚ್ಚಿಸುವ ಮತ್ತೊಂದು ಪ್ರಯತ್ನವಾಗಿದೆ.
ಗ್ರಾಮೀಣ ಪ್ರದೇಶದ ಕೆಲ ಪೋಷಕರು ಮಕ್ಕಳಿಗೆ ನೋಟ್‌ಬುಕ್‌ಗಳನ್ನು ಖರೀದಿಸಲು ಕಷ್ಟಪಡುತ್ತಿದ್ದಾರೆ ಮತ್ತು ಅದು ಅವರ ಬರವಣಿಗೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕರಿಂದ ವರದಿಗಳು ಬಂದಿವೆ. ಇದು ಸರ್ಕಾರವನ್ನು ಉಚಿತ ನೋಟ್‌ಬುಕ್‌ಗಳನ್ನು ಪೂರೈಸುವ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವಾಯಿತು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.