ಲೈಂಗಿಕ ಕಿರುಕುಳ ಪ್ರಕರಣ: ಕಾಲೇಜಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಭೇಟಿ

| Published : Oct 31 2025, 02:45 AM IST

ಲೈಂಗಿಕ ಕಿರುಕುಳ ಪ್ರಕರಣ: ಕಾಲೇಜಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ವ್ಯಕ್ತಿಗಳು ತಪ್ಪು ಮಾಡಿದರೂ ಅದು ತಪ್ಪು. ಸರ್ಕಾರಿ ಕಾಲೇಜು ಎಂದ ಮೇಲೆ ಇಲ್ಲಿ ಪ್ರತಿಯೊಬ್ಬ ಬಡವ-ಶ್ರೀಮಂತ ಎನ್ನುವ ಬೇಧ-ಭಾವವಿಲ್ಲದೇ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರದು.

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎನ್ನುವ ಆರೋಪ ವ್ಯಕ್ತವಾದ ಹಿನ್ನೆಲೆ ಧಾರವಾಡದ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಕರಿಮುನ್ನಿಸಾ ಸೈಯದ್‌ ಮತ್ತು ನಿರ್ದೇಶಕ ಲಕ್ಷ್ಮೀಪತಿ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಆಡಳಿತ ಮಂಡಳಿ, ದೂರುದಾರ ವಿದ್ಯಾರ್ಥಿನಿ, ಪಾಲಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಕೆಲಕಾಲ ಚರ್ಚಿಸಿದರು.

ಕಾಲೇಜಿನಲ್ಲಿ ಆಗಬಾರದ ಘಟನೆ ನಡೆದ ವಿಚಾರದಲ್ಲಿ ತಮಗೆ ದೂರಿನ ಜೊತೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ವಿದ್ಯಾರ್ಥಿನಿ ದಾಖಲಿಸಿದ ದೂರು ಮತ್ತು ಹಲವು ಕಾರಣಗಳಿಂದ ಈ ಭೇಟಿ ನೀಡಿದ್ದು, ಇಲ್ಲಿಯ ಘಟನೆಯ ಕುರಿತು ಸಂಪೂರ್ಣವಾದ ಮಾಹಿತಿ ಪಡೆದಿದ್ದೇನೆ. ಯಾವುದೇ ವ್ಯಕ್ತಿಗಳು ತಪ್ಪು ಮಾಡಿದರೂ ಅದು ತಪ್ಪು. ಸರ್ಕಾರಿ ಕಾಲೇಜು ಎಂದ ಮೇಲೆ ಇಲ್ಲಿ ಪ್ರತಿಯೊಬ್ಬ ಬಡವ-ಶ್ರೀಮಂತ ಎನ್ನುವ ಬೇಧ-ಭಾವವಿಲ್ಲದೇ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರದು. ತಹಶೀಲ್ದಾರರಿಂದ, ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಿಂದ ನಮಗೆ ಮಾಹಿತಿ ದೊರೆತಿದ್ದರಿಂದ ಭೇಟಿ ನೀಡಿದ್ದೇವೆ.

ಪ್ರಥಮ ಮಾಹಿತಿ ಕಲೆಹಾಕಿ ನಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಈ ವಿಚಾರವಾಗಿ ಯಾವೆಲ್ಲ ಕ್ರಮ ಜರುಗಿಸಬಹುದು. ಮತ್ತು ನಿಯಮಾನುಸಾರ ಸೂಕ್ತಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ಪ್ರತ್ಯೇಕವಾಗಿ ಪತ್ರದ ರೂಪದಲ್ಲಿ ತಮ್ಮಲ್ಲಿರುವ ಅಭಿಪ್ರಾಯ ಬರೆದು ತಿಳಿಸಿ ಎಂದು ಜಂಟಿ ನಿರ್ದೇಶಕಿ ಕರಿಮುನ್ನಿಸಾ ಸೈಯದ್‌ ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಂಜೇಶ್ವರ ನಾಯಕ ಮಾತನಾಡಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ಕುರಿತಾಗಿ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಆಗ್ರಹಿಸಿದ್ದೇವೆ. ಇಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣದ ಹಿತದೃಷ್ಟಿಯಿಂದ ಉಪನ್ಯಾಸಕರನ್ನು ಅಮಾನತುಗೊಳಿಸಿ, ಪ್ರಾಂಶುಪಾಲರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹಾಬಲೇಶ್ವರ ನಾಯ್ಕ, ಮಧುಕೇಶ್ವರ ದೇವರಬಾವಿ, ಪ್ರಮುಖರಾದ ವಿಠಲ ಶೆಟ್ಟಿ, ಪ್ರಮೋದ ಬಾನಾವಳಿಕರ, ಜಗದೀಶ ಖಾರ್ವಿ, ಸುಂದರ ಖಾರ್ವಿ, ಸಚಿನ ಅಸ್ಫೋಟಕರ, ಗುರುದಾಸ ಬಾನಾವಳಿಕರ, ದ್ರುವ, ಸೂರಜ, ಜೈರಾಮ ಹಾಗೂ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.