ಹಿರಿಯೂರಿನಿಂದ ವರ್ಗಾವಣೆಗೊಂಡ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅವರಿಗೆ ರೈತ ಸಂಘದಿಂದ ಗೌರಿವಿಸ, ಬೀಳ್ಕೊಡುಗೆ ನೀಡಲಾಇತು. ಇದೇ ಸಂದರ್ಭದಲ್ಲಿ ನೂತನ ಅಧಿಕಾರಿ ಅಶೋಕ್ ಅವರಿಗೆ ಸ್ವಾಗತ ಕೋರಲಾಯಿತು.

ಹಿರಿಯೂರು: ನಗರದ ಹೊರವಲಯದ ವೈಟ್ ವಾಲ್ ಸಭಾಂಗಣದಲ್ಲಿ ಹಿರಿಯೂರಿನ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ಮೊಳಕಾಲ್ಮೂರು ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆ ತಾಲೂಕು ರೈತ ಸಂಘ ವತಿಯಿಂದ ಅವರಿಗೆ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ ಈ ಸಂದರ್ಭ ಮಾತನಾಡಿ, ಕಳೆದೆರಡು ವರ್ಷಗಳಿಂದ ಪ್ರಾಮಾಣಿಕ, ರೈತಸ್ನೇಹಿಯಾಗಿ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಮಂಜುನಾಥ್ ಅವರು ಯಶಸ್ವಿಯಾಗಿದ್ದಾರೆ. ಬಿತ್ತನೆಬೀಜ ಮತ್ತು ಕೃಷಿ ಪರಿಕರಗಳನ್ನು ಸಕಾಲಕ್ಕೆ ರಿಯಾಯಿತಿ ದರದಲ್ಲಿ ರೈತರಿಗೆ ತಲುಪಿಸುತ್ತಿದ್ದರು ಎಂದರು.

ಕೃಷಿ ಇಲಾಖೆ ಆವರಣದಲ್ಲಿ ಅನೇಕ ಕಾರ್ಯಗಳನ್ನು ಮಾಡಿ ಸರ್ಕಾರದ ಯೋಜನೆಯ ಮಾಹಿತಿಗಳನ್ನು ರೈತರಿಗೆ ತಿಳಿಸಿಸುವ ಮೂಲಕ ಅವರು ರೈತಸ್ನೇಹಿ ಎಂಬುದನ್ನು ನಿರೂಪಿಸಿದ್ದಾರೆ. ಅವರು ಈಗ ಬೇರೆಡೆ ವರ್ಗಾವಣೆಯಾಗಿದ್ದು, ಅಲ್ಲಿಯೂ ಅವರು ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಕೃಷಿ ಇಲಾಖೆಯ ನೂತನ ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಅವರಿಗೆ ಸ್ವಾಗತ ಕೋರಲಾಯಿತು. ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಒ. ಶಿವಕುಮಾರ್, ಕಾರ್ಯಾಧ್ಯಕ್ಷ ಎಚ್.ದಸ್ತಗಿರಿ ಸಾಬ್, ಯುವ ಘಟಕ ಅಧ್ಯಕ್ಷ ಚೇತನ್ ಯಳನಾಡು, ಜಿಲ್ಲಾ ಉಪಾಧ್ಯಕ್ಷ ಎಂ.ಲಕ್ಷ್ಮೀಕಾಂತ್, ಬಿ.ಡಿ. ಶ್ರೀನಿವಾಸ್, ತಾಲೂಕು ಉಪಾಧ್ಯಕ್ಷ ಮೇಟಿಕುರ್ಕೆ ತಿಪ್ಪೇಸ್ವಾಮಿ, ನಿತ್ಯಶ್ರೀ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಸಿದ್ದರಾಮಣ್ಣ, ಹೊಳಲ್ಕೆರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಕುಮಾರ್, ಬಬ್ಬೂರು ಸಂತೋಷ್, ಬಬ್ಬೂರು ಸುರೇಶ್, ಶಿವಮೂರ್ತಿ, ಕಿರಣ್, ಪವಿತ್ರ, ಪಾರ್ವತಮ್ಮ, ಪಲ್ಲವಿ, ಚಂದ್ರಶೇಖರ್ ಮುಂತಾದವರು ಹಾಜರಿದ್ದರು.