ಮಾದರಿ ಯೋಜನೆಗಳ ಮೂಲಕ ಜನತೆಯ ಹೃದಯ ಗೆದ್ದ ಜಿ.ಎಸ್. ಪಾಟೀಲ

| Published : Apr 10 2025, 01:17 AM IST

ಮಾದರಿ ಯೋಜನೆಗಳ ಮೂಲಕ ಜನತೆಯ ಹೃದಯ ಗೆದ್ದ ಜಿ.ಎಸ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಡಂಬಳ ಭಾಗದಲ್ಲಿ ಸಿಂಗಟಾಲೂರು ಏತ ನೀರಾವರಿ ಬಂದ ಬಳಿಕ ಇಲ್ಲಿಯ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದಕ್ಕೂ ಮುನ್ನ ಇಲ್ಲಿಯ ಕೆಲವು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದರು. ಅದನ್ನು ಗಮನಿಸಿದ ಶಾಸಕ ಜಿ.ಎಸ್. ಪಾಟೀಲ್‍ ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಸರಳ ವ್ಯಕ್ತಿತ್ವ ಸಜ್ಜನಿಕೆಯ ಗುಣ, ಕಾರ್ಯದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆ, ಅತ್ಯುತ್ತಮ ಮಾದರಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯವೇ ನೋಡುವಂತಹ ಛಾಪು ಮೂಡಿಸಿರುವ ಅಪರೂಪದ ವ್ಯಕ್ತಿತ್ವ ಹೊಂದಿರುವ ನಾಯಕರ ಸಾಲಿನಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಮತಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಜಿ.ಎಸ್. ಪಾಟೀಲ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಶಾಸಕರಾಗಿ ಜಿ.ಎಸ್. ಪಾಟೀಲ ಅವರು ಸಿಂಗಟಾಲೂರ ಯೋಜನೆಯ ಮೂಲಕ ಡಂಬಳ, ತಾಮ್ರುಗುಂಡಿ, ಪೇಠಾ ಆಲೂರ, ಬಸಾಪುರ, ಜಂತ್ಲಿ ಶಿರೂರ ಕೆರೆ ಭರ್ತಿಗೊಳಿಸಿದರು. ಅದು ತೋಟಗಾರಿಕೆ ಮತ್ತು ಕೃಷಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಈ ಭಾಗದ ರೈತರನ್ನು ಸಬಲರನ್ನಾಗಿ ಮಾಡಿತು. ಈ ಬಾರಿ ಬಜೆಟ್‌ನಲ್ಲಿ ತೋಟಗಾರಿಕಾ ಕಾಲೇಜು ಘೋಷಣೆಯಾಗಿದೆ. ಹೀಗಾಗಿ ಈ ಭಾಗದ ರೈತರ ಹೊಸ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅನುಕೂಲತೆ ಕಲ್ಪಿಸಿದ ಶಾಸಕ ಜಿ.ಎಸ್. ಪಾಟೀಲ್ ಅವರ ಕಾರ್ಯಕ್ಕೆ ರೈತರು ಪ್ರಶಂಸೆಯ ವ್ಯಕ್ತಪಡಿಸುತ್ತಾರೆ.

ಡಂಬಳ ಹೋಬಳಿ ಅಭಿವೃದ್ಧಿ: ವೆಂಕಟಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಅನುದಾನದಡಿ ₹70 ಲಕ್ಷದ ಸಿಸಿ ರಸ್ತೆ, ಯಕ್ಲಾಸಪುರ ಎಸ್‌ಸಿ ಕಾಲನಿಯಲ್ಲಿ ₹20 ಲಕ್ಷ ಸಿಸಿ ರಸ್ತೆ, ಮುಜಾರಾಯಿ ಇಲಾಖೆ ಅಡಿ ₹5 ಲಕ್ಷ, ಪೇಠಾಆಲೂರ ಗ್ರಾಮದಲ್ಲಿ ಪಂಚಾಯತ್‌ ರಾಜ್ ಸಣ್ಣ ನೀರಾವರಿ ಇಲಾಖೆ 200 ಲಕ್ಷ ಕೆರೆ ಸುಧಾರಣೆ, ಶ್ರೀ ಹಿನ್ನಂತ್ಯಮ್ಮ ದೇವಸ್ಥಾನ ಮುಂಭಾಗ ₹13 ಲಕ್ಷದ ಸಿಸಿ ರಸ್ತೆ, ಡಂಬಳ ಗ್ರಾಮದ ಗುಡ್ಡದವರ ಮನೆಯ ರಸ್ತೆಗೆ ₹15 ಲಕ್ಷ, ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ₹16.50 ಲಕ್ಷ ಸಿಸಿ ರಸ್ತೆ, ಡಂಬಳ ಗ್ರಾಮದ ರೈತರ ಹಿತಕ್ಕಾಗಿ ₹100 ಲಕ್ಷದಡಿ ನೂತನ ಕೆರೆ ಕಾಲುವೆ ನಿರ್ಮಾಣ, ಮಹಿಳಾ ಸಂಘಗಳ ಹಿತಕ್ಕಾಗಿ ₹5 ಲಕ್ಷ ಮಹಿಳಾ ಸಂಘ ಕಟ್ಟಡ, ಜಂತ್ಲಿಶಿರೂರ ಗ್ರಾಮದ ₹80 ಲಕ್ಷ ಸಿಸಿ ರಸ್ತೆ, ಜಂತ್ಲಿ ಶಿರೂರ ರೈತ ಆರ್ಥಿಕ ಶಕ್ತಿ ಬಲಗೊಳಿಸಲು ₹100 ಲಕ್ಷ ಕೆರೆ ಕಾಲುವೆ ಅಭಿವೃದ್ಧಿ ಮತ್ತಿತರ ಅಭಿವೃದ್ಧಿ ಕಾರ್ಯಗಳು ನಡೆದಿವೆ.

ಬರದ ನಾಡಿನಲ್ಲಿ ವಿವಿಧ ಬೆಳೆ: ಮುಂಡರಗಿ ಅಂದರೆ ಬರ, ಗುಳೆ ಹೋಗುವುದು, ಮಳೆ ಅನಿಶ್ಚಿತತೆ, ರೈತರ ಆತ್ಮಹತ್ಯೆ ಮಾಡಿಕೊಳ್ಳುವುದು... ಇಂತಹ ಪರಿಸ್ಥಿತಿ ಮೊದಲಿನಿಂದ ಇತ್ತು. ಸಿಂಗಟಾಲೂರ ಯೋಜನೆ ಜಾರಿಗೆ ಬಂದಿದ್ದಷ್ಟೆ ತಡ ರೈತರು, ಕಾರ್ಮಿಕರಲ್ಲಿ ಹೊಸ ಕನಸುಗಳು ಮೂಡಿದವು. ಗುಳೆ ಹೋಗುವುದು ತಪ್ಪಿತು. ರೈತರು ವಿವಿಧ ಬಗೆಯ ತರಕಾರಿ ಬೆಳೆಯಲಾರಂಭಿಸಿದರು. ಈರುಳ್ಳಿ, ಬಾಳೆ, ಡ್ರ್ಯಾಗನ್, ದಾಳಿಂಬೆ, ಮಾವು, ಪೇರಲ, ಬಾರೆ, ಲೀಚಿ, ಪಪಾಯಿ ಹಣ್ಣುಗಳನ್ನು ಕೆರೆ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರು ಬೆಳೆಯುತ್ತಿದ್ದಾರೆ. ನೀರಾವರಿ ಕಾಲುವೆ ಹತ್ತಿರವಿರುವ ರೈತರು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ ಹಾಗೂ ಹೊರರಾಜ್ಯಗಳಿಗೂ ಕೃಷಿ ಉತ್ಪನ್ನಗಳನ್ನು ಕಳುಹಿಸುತ್ತಾರೆ. ಆರ್ಥಿಕವಾಗಿ ಸಬಲರಾಗಿದ್ದಾರೆ. ಇದಕ್ಕೆಲ್ಲ ಕಾರಣರಾದ ಜಿ.ಎಸ್‌. ಪಾಟೀಲ್‌ ಅವರನ್ನು ರೈತರು ನೆನೆಯುತ್ತಾರೆ.

ತೋಟಗಾರಿಕಾ ಕಾಲೇಜು: ಈ ಭಾಗದಲ್ಲಿ ಸಿಂಗಟಾಲೂರು ಏತ ನೀರಾವರಿ ಬಂದ ಬಳಿಕ ಇಲ್ಲಿಯ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದಕ್ಕೂ ಮುನ್ನ ಇಲ್ಲಿಯ ಕೆಲವು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದರು. ಅದನ್ನು ಗಮನಿಸಿದ ಶಾಸಕ ಜಿ.ಎಸ್. ಪಾಟೀಲ್‍ ಅವರು ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಈ ತೋಟಗಾರಿಕೆ ಕಾಲೇಜು ಘೋಷಣೆಯಾದ ಬಳಿಕ ಇಲ್ಲಿಯ ರೈತರಲ್ಲಿ ಹರ್ಷದ ಹೊನಲು ಹರಿದಿದೆ.ಸಚಿವ ಸ್ಥಾನ ಸಿಗಲಿ: ಜನಮುಖಿ, ಜನಾನುರಾಗಿಯಾಗಿ ರೈತರ ಆರ್ಥಿಕ ಶಕ್ತಿ ತುಂಬಲು ಕೆರೆಗಳ ಭರ್ತಿಗೊಳಿಸಿ, ಕಾರ್ಮಿಕರ, ಯುವಕರ, ಗ್ರಾಮೀಣ ಜನತೆಯ ಹಿತ ಬಯಸುವ, ಜನಸೇವೆಯನ್ನು ಸದಾ ಮಾಡುತ್ತಾ ಬಂದಿರುವ ಶಾಸಕ ಜಿ.ಎಸ್. ಪಾಟೀಲ ಅವರ ಕಾರ್ಯ ಮೆಚ್ಚುವಂಥದ್ದು. ಅವರಿಗೆ ಮುಂದಿನ ದಿನಮಾನಗಳಲ್ಲಿ ಸಚಿವ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರಾದ ಗೋಣಿಬಸಪ್ಪ ಕೊರ್ಲಹಳ್ಳಿ, ಅಬ್ದುಲ್‍ಸಾಬ ಕಲಕೇರಿ ಆಶಿಸಿದರು.

ಶಾಸಕ ಜಿ.ಎಸ್. ಪಾಟೀಲ ಅವರು ಸದಾ ಜನಸಾಮಾನ್ಯರ ಹಿತ ಕಾಪಾಡುವುದಕ್ಕಾಗಿ ರಾಜಕೀಯ ಮರೆತು ಶ್ರಮಿಸುತ್ತಾರೆ. ಅವರು ರೈತಾಪಿ ಕುಟುಂಬದಲ್ಲಿ ಹುಟ್ಟಿದ್ದರಿಂದ ರೈತರ ಕಷ್ಟ-ಕಾರ್ಪಣ್ಯಗಳನ್ನು ಬಲ್ಲವರಾಗಿದ್ದಾರೆ. ಅವರು ರೈತರ ಶ್ರೇಯಸ್ಸಿಗಾಗಿ, ರೋಣ ಕ್ಷೇತ್ರದ ಅಭಿವೃದ್ಧಿಯಗಾಗಿ ಶ್ರಮಿಸುತ್ತಿರುವ ಜನನಾಯಕರು ಎಂದು ಜಿಪಂ ಮಾಜಿ ಅಧ್ಯಕ್ಷ ಈರಣ್ಣಗೌಡ ಈ. ನಾಡಗೌಡರ ಹೇಳಿದರು.