ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.ಮಹಾ ಶಿವರಾತ್ರಿ ಹಬ್ಬದ ನಂತರದ ಸೋಮವಾರ ಸಂಜೆ ಬಾಳೆಕಂಬ ತಂದು ದೇಗುಲದಲ್ಲಿ ಪ್ರತಿಷ್ಠಾಪಿಸಿ ರಂಗದ ಕುಣಿತದೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯ ಹಬ್ಬಕ್ಕೆ ಚಾಲನೆ ದೊರೆಯಿತು. 15 ದಿನಗಳ ಕಾಲ ಪ್ರತಿ ದಿನ ರಾತ್ರಿ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ರಂಗದ ಕುಣಿತ ಜರುಗಿದ್ದು ಪಾನಕ, ಪ್ರಸಾದ ವಿನಿಯೋಗ ನಡೆಯಿತು.
ಶನಿವಾರ ಬೆಳಗ್ಗೆ ಗ್ರಾಮದ 11 ದೇಗುಲಗಳಿಗೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಲಂಕಾರ ಮಾಡಲಾಗಿದ್ದು ಉತ್ಸವದ ಬೀದಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಲಾಗಿತ್ತು. ಶನಿವಾರ ಶ್ರೀ ಬಸವೇಶ್ವರ ಸ್ವಾಮಿಗೆ ಮಜ್ಜನ ಪೂಜೆ ನೆರವೇರಿದ್ದು, ಭಾನುವಾರ ಬೆಳಗ್ಗೆ ಅಭಿಷೇಕ, ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಬಳಿಕ ಒಡವೆ ವಸ್ತ್ರಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ಬೆಳಗ್ಗೆಯಿಂದಲೇ ದೇಗುಲದಲ್ಲಿ ಪೂಜಾ ವಿಧಿವಿಧಾನಗಳು ಪ್ರಾರಂಭಗೊಂಡಿದ್ದು, ಭಕ್ತರು ಹಣ್ಣು ಕಾಯಿ ಅರ್ಪಿಸಿ ಗಂಧ, ಕರ್ಪೂರ ಬೆಳಗಿಸಿದರು. ಶ್ರೀ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ಸುಮಾರಿನಲ್ಲಿ ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ರಥವನ್ನು ಸಿಂಗರಿಸಲಾಯಿತು. ಸಂಜೆ 7 ಗಂಟೆಯಲ್ಲಿ ಮಂಗಳವಾದ್ಯದೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯನ್ನು ಕರೆತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪ್ರಮುಖರು ಬಾಳೆಕಂಬವನ್ನು ಕತ್ತರಿಸುತಿದ್ದಂತೆಯೇ ಭಕ್ತರು ಬಸವ ನಾಮ ಜಪಿಸುತ್ತ ರಥ ಎಳೆದರು. ಒಂದೆಡೆ ರಥ ನಿಲ್ಲಿಸಿದ ನಂತರ ಭಕ್ತರು ರಥದ ಕಲ್ಲಿನ ಚಕ್ರಗಳಿಗೆ ಈಡುಗಾಯಿ ಹಾಕುವ ಮೂಲಕ ಹರಕೆ ತೀರಿಸಿದರು. 3ರಿಂದ 4 ಸಾವಿರ ತೆಂಗಿನಕಾಯಿಗಳನ್ನು ಈಡುಗಾಯಿ ಒಡೆದಿದ್ದು ವಿಶೇಷವಾಗಿತ್ತು. ಪಾನಕ ಪ್ರಸಾದ ವಿನಿಯೋಗ ನಡೆಯಿತು. ನಂತರ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ, ಎನ್. ಆರ್. ರತ್ನರಾಜ್, ಗುಡಿಗೌಡ ಪ್ರಕಾಶ್, ಪ್ರಧಾನ ಅರ್ಚಕರಾದ ರೇಣುಕಾರಾಧ್ಯ, ಅರ್ಚಕರ ತಂಡ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
