ಚಾಲಕರ ಮೇಲೆ ಹಲ್ಲೆ ಆರೋಪ । ಕೆರೆ ಮಣ್ಣು ತುಂಭುವ ವಿಚಾರದಲ್ಲಿ ಗಲಾಟೆ

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಕೊಡಗಿಹಳ್ಳಿ ಗ್ರಾಮದಲ್ಲಿ ಗಾಂಜಾ ನಶೆಯಲ್ಲಿದ್ದರೆಂದು ಆರೋಪಿಸಲಾದ ಮೂವರು ಯುವಕರು ಟಿಪ್ಪರ್ ಚಾಲಕರ ಮೇಲೆ ಹಲ್ಲೆ ನಡೆಸಿ, ಕಾರಿಗೆ ಟಿಪ್ಪರ್‌ನಿಂದ ಗುದ್ದಿಸಿ ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.

ಕಣತೂರು ಗ್ರಾಮದ ಕಿರಣ್, ಕೀರ್ತನ್ ಹಾಗೂ ಕೊಡಗಿಹಳ್ಳಿ ಗ್ರಾಮದ ಓಂಕಾರ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.ನೇರಲೆಕೆರೆ ಗ್ರಾಮದ ದಿನೇಶ್ ಎಂಬುವವರು ಗ್ರಾಮದ ದೇವಾಲಯಕ್ಕೆ ಹಣ ಪಾವತಿಸಿ, ಕಳೆದ ಒಂದು ತಿಂಗಳಿನಿಂದ ಕೆರೆಯಿಂದ ಲೇಔಟ್‌ಗೆ ಮಣ್ಣು ಸಾಗಿಸುತ್ತಿದ್ದರು ಎನ್ನಲಾಗಿದೆ. ಕಳೆದ ರಾತ್ರಿ ಚಾಲಕರಿಗೆ ಊಟ ನೀಡಲು ಕಾರಿನಲ್ಲಿ ಕೆರೆ ಬಳಿ ಬಂದಿದ್ದ ದಿನೇಶ್, ಚಾಲಕರಿಗೆ ಊಟ ಕೊಟ್ಟು ಮಣ್ಣು ಲೋಡ್ ಮಾಡುವ ಕಾರ್ಯದಲ್ಲಿ ತೊಡಗಿದ್ದ ವೇಳೆ, ಲಾಂಗ್, ಮಚ್ಚು ಹಾಗೂ ರಾಡ್‌ಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಟಿಪ್ಪರ್ ಚಾಲಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ಬಳಿಕ ಟಿಪ್ಪರ್‌ನಿಂದಲೇ ದಿನೇಶ್‌ ಕಾರಿಗೆ ಗುದ್ದಿಸಿ ಸ್ವಲ್ಪ ದೂರ ಎಳೆದೊಯ್ದು ಸಂಪೂರ್ಣ ಜಖಂಗೊಳಿಸಿದ್ದಾರೆ. ಇದಾದ ಬಳಿಕ ಗಂಗಾಧರ್ ಎಂಬುವವರ ಮನೆ ಮೇಲೂ ದಾಳಿ ನಡೆಸಿ, ಬಾಗಿಲು ಒಡೆಯಲು ಯತ್ನಿಸಿದ್ದಾರೆ. ಪುಂಡರ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಆರೋಪಿಗಳನ್ನು ವಿಚಾರಣೆ ಬಳಿಕ ಬಿಟ್ಟು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.