ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಲಿಂಗ ಸೂಕ್ಷ್ಮ ಸಂವೇದನೆ ಮತ್ತು ಯುವಜನತೆ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾಂಡೇಲಿಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷರು ಹಾಗೂ ಮಹಿಳೆಯರು ಪುರುಷಾಧಿಪತ್ಯದ ಮೌಲ್ಯಗಳನ್ನೇ ನಂಬಿ ಬದುಕುತ್ತಿರುವುದರಿಂದ ಹೆಣ್ಣು ಅನುಭವಿಸುವ ಶೋಷಣೆ, ಸಂಕಟಗಳು ಯಾರಿಗೂ ಅರ್ಥವಾಗುತ್ತಿಲ್ಲ. ಹೀಗಾಗಿ ಹೆಣ್ಣಿನ ವಿಷಯದಲ್ಲಿ ಸಮಾಜ ಕಠೋರವಾಗಿ ವರ್ತಿಸುತ್ತದೆ. ಲಿಂಗ ಸೂಕ್ಷ್ಮ ಸಂವೇದನೆಯ ಕೊರತೆಯೇ ಇದಕ್ಕೆ ಕಾರಣ. ಹೆಣ್ಣು ದೇವತೆಯೂ ಅಲ್ಲ, ರಾಕ್ಷಸಿಯೂ ಅಲ್ಲ. ಅವಳೂ ಒಂದು ಜೀವ ಎಂಬ ಅಂತಃಕರಣವೇ ಲಿಂಗ ಸೂಕ್ಷ್ಮಸಂವೇದನೆ. ಹೆಣ್ಣನ್ನು ಸಮಾನವಾಗಿ ಪ್ರೀತಿಸುವ ಗೌರವಿಸುವ ಸೂಕ್ಷ್ಮ ವಿವೇಕವನ್ನು ಸಮಾಜ ಅಳವಡಿಸಿಕೊಂಡರೆ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ತುಮಕೂರು ವಿಶ್ವ ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ. ಬಸವರಾಜ ತಿಳಿಸಿದರು.
ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಲಿಂಗ ಸೂಕ್ಷ್ಮ ಸಂವೇದನೆ ಮತ್ತು ಯುವಜನತೆ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ವಿಶೇಷ ಉಪನ್ಯಾಸ ನೀಡಿದ ತೃಪ್ತಿ ನಾಯಕ ಸಾವಿರಾರು ವರ್ಷಗಳಿಂದ ಹೆಣ್ಣು ಅನುಭವಿಸುತ್ತಾ ಬಂದ ಅಸಮಾನತೆ ಮತ್ತು ಶೋಷಣೆಗಳನ್ನು ವಿವರಿಸಿ ಯುವಜನತೆ ಲಿಂಗ ಸೂಕ್ಷ್ಮ ಸಂವೇದನೆಯನ್ನು ರೂಪಿಸಿಕೊಂಡು ಸಮಸಮಾಜವನ್ನು ನಿರ್ಮಿಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ತಸ್ಲೀಮಾ ಜೋರುಮ್, ಮನೋಹರ ಉಡಚಂಚಿ ಭಾಗವಹಿಸಿದ್ದರು. ಡಾ. ಎಂ.ಡಿ. ಒಕ್ಕುಂದ, ಡಾ. ವಿನಯಾ ನಾಯಕ, ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕ ಯೋನಲ್, ಪ್ರಶಾಂತ, ಸೀಮಾ, ಅನುಷಾ ಉಪಸ್ಥಿತರಿದ್ದರು. ಗೀತಾ ಕೋಟೆನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಶ್ವಿನಿ ಸ್ವಾಗತಿಸಿದರು. ಸೋನಿ ಪರಿಚಯಿಸಿದರು. ಅತೀಫಾ ವಂದಿಸಿದರು. ಸೋನಾಲಿ ನಿರೂಪಿಸಿದರು.