ಬಿಇಒ ರೇಖಾ ನಾಯಕ ಕರೆ, ಬೀಗಾರಿನಲ್ಲಿ ಸಾಧನಾ ಸಂಭ್ರಮ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಒತ್ತಡದ ಜೀವನದಲ್ಲಿ ಸೃಜನಶೀಲ ಚಟುವಟಿಕೆ ಮೂಲಕ ಮಕ್ಕಳನ್ನು ಕ್ರಿಯಾಶೀಲರಾಗಿಸಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯಕ ಹೇಳಿದರು.

ಬೀಗಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಧನಾ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿನ ಕಲಿಕೆ ಅನನ್ಯವಾದ ಅನುಭವ ನೀಡುತ್ತದೆ. ಶಿಕ್ಷಕ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿ ಸಮಾಜಕ್ಕೆ ಪರಿಚಯಿಸಿದರೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಸತತ ಪರಿಶ್ರಮದಿಂದ ಉತ್ತಮ ಫಲಶ್ರುತಿ ದೊರಕುತ್ತದೆ. ಸುಪ್ತ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುವ ಕೆಲಸ ನಿರಂತರವಾಗಿ ನಾವು ನೀಡಬೇಕಿದೆ ಎಂದು ಹೇಳಿದರು.ಹಿರಿಯ ಪತ್ರಕರ್ತೆ ವಿನುತಾ ಹೆಗಡೆ ಕಾನಗೋಡು ಮಾತನಾಡಿ, ಮಾನವೀಯತೆಯ ನೆಲೆ ಇನ್ನೂ ಈ ನೆಲದ ಗುಣದಲ್ಲಿ ಅಡಗಿದೆ. ಕೃಷಿ ತಪಸ್ಸಿನ ನೆಲದಲ್ಲಿ ಹುಟ್ಟಿದ ಮಗುವಿಗೆ ಬಾಲ್ಯದ ಕಲಿಕೆ ಜೀವನದ ಸ್ಮರಣೀಯ ಕ್ಷಣಗಳಾಗಿವೆ. ಉತ್ತಮ ಶಿಕ್ಷಣ ಪಡೆಯುವುದರಿಂದ ಸಮಾಜದ ಜೀವನಮಟ್ಟ ಏರಲು ಸಾಧ್ಯವಿದೆ ಎಂದರು.

ಶಿಕ್ಷಣ ಇಲಾಖೆಯ ಸಂಯೋಜಕ ಸುಧಾಕರ ನಾಯ್ಕ ಮಾತನಾಡಿ, ಮಕ್ಕಳೆಂದರೆ ಕೌತುಕದ ಕಣ್ಣಿಗೆ ಸಾಕ್ಷಿಯಾಗಿರಬೇಕು. ಓದಿನ ಸತತ ಪರಿಶ್ರಮವು ವ್ಯಕ್ತಿತ್ವದ ಸಾಧನೆಗೆ ಅಡಿಪಾಯ ಆಗಬಲ್ಲದು. ಛಲವು ನಮ್ಮತನ ಅರಳಿಸಬಲ್ಲದು ಎಂದರು.


ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹ ಕೋಮಾರ ಉಪ್ಪರಿಗೆಮನೆ ಅಧ್ಯಕ್ಷತೆ ವಹಿಸಿದ್ದರು. ವರದಿಗಾರ ದತ್ತಾತ್ರೇಯ ಭಟ್ಟ, ಎಸ್‌ಡಿಎಂಸಿ ಉಪಾಧ್ಯಕ್ಷೆ ವಿಜಯಾ ಗಾಂವ್ಕರ ಉಪಸ್ಥಿತರಿದ್ದರು. ಏಳನೇ ತರಗತಿಯ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಬೀಳ್ಕೊಡಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಮಂಜುನಾಥ ಟಿ. ನಾಯಕ ಸ್ವಾಗತಿಸಿದರು. ಶಿಕ್ಷಕ ಸುರೇಶ ಎಸ್. ಗೌಡ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ಡಯಾಸ್ ವಂದಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪ್ರಶಸ್ತಿ ಫಲಕ, ಪತ್ರಗಳ ಪ್ರದರ್ಶನವನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.