ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗ ಸಂಸ್ಥೆ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಇದರ 40ನೇ ವರ್ಷದ ಘಟಿಕೋತ್ಸವ- ಪದವಿ ಪ್ರದಾನ ಸಮಾರಂಭ ಶನಿವಾರ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಜರುಗಿತು. ಒಟ್ಟು 521 ವಿದ್ಯಾರ್ಥಿಗಳು ಈ ಬಾರಿ ಪದವಿ ಪಡೆದಿದ್ದು, ಇದರಲ್ಲಿ ಎಂಬಿಎ (ಕೋರ್) ವಿಭಾಗದ 348 ವಿದ್ಯಾರ್ಥಿಗಳು. ಬ್ಯಾಂಕಿಂಗ್ ವಿಭಾಗದ 56, ಮಾರ್ಕೆಟಿಂಗ್ ವಿಭಾಗದ 50, ಮಾನವ ಸಂಪನ್ಮೂಲ ವಿಭಾಗದ 44 ಮತ್ತು ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ 23 ವಿದ್ಯಾರ್ಥಿಗಳು ಸೇರಿದ್ದಾರೆ.
ಈ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಸೇಲ್ಸ್‌ಫೋರ್ಸ್ ಸಂಸ್ಥೆಯ ಸೌತ್ ಏಷ್ಯಾ ವಿಭಾಗದ ಅಧ್ಯಕ್ಷೆ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಅರುಂಧತಿ ಭಟ್ಟಾಚಾರ್ಯ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಘಟಿಕೋತ್ಸವ ಉಪನ್ಯಾಸ ನೀಡಿದರು.ಬದಲಾಗುತ್ತಿರುವ ಜಗತ್ತು ನಿರಂತರ ಪರಿವರ್ತನೆ ಹೊಂದುತ್ತಿರುವ ಕಾಲದಲ್ಲಿ ಸ್ಪಷ್ಟವಾದ ಉದ್ದೇಶ ಮಾತ್ರ ನೈಜವಾದ ಬದಲಾವಣೆಯನ್ನು ತರಬಲ್ಲದು. ಈ ಹಿನ್ನೆಲೆಯಲ್ಲಿ ಮಾಹೆಯು ನಾವೀನ್ಯ, ಹೊಣೆಗಾರಿಕೆ ಮತ್ತು ಅಗಾಧ ಪ್ರಮಾಣದ ಪ್ರಭಾವವನ್ನು ಉಂಟು ಮಾಡುವ ಸಮರ್ಥ ಯುವ ನಾಯಕರನ್ನು ರೂಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಪೇಜ್ ಇಂಡಸ್ಟ್ರೀಸ್ ಸಂಸ್ಥೆಯ ಸಿಇಒ ಹಾಗೂ ಟ್ಯಾಪ್ಮಿಯ ಹಳೆ ವಿದ್ಯಾರ್ಥಿ ಕಾರ್ತಿಕ್ ವೈ. ಅವರು ಗೌರವ ಅತಿಥಿಯಾಗಿ ಮಾತನಾಡಿ, “ಟ್ಯಾಪ್ಮಿ ವಿದ್ಯಾರ್ಥಿಗಳಿಗೆ ಕೇವಲ ಶೈಕ್ಷಣಿಕ ಪದವಿಗಳನ್ನು ಕೊಡುವುದಲ್ಲ, ವಾಸ್ತವ-ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ಮನೋಸ್ಥೈರ್ಯವನ್ನೂ ನೀಡುತ್ತದೆ’’ ಎಂದು ಹೇಳಿದರು. ಪದವಿ ಪಡೆದ ವಿದ್ಯಾರ್ಥಿಗಳನ್ನು ಮಾಹೆಯ ಕುಲಪತಿ ಲೆಜ (ಡಾ.) ಎಂ.ಡಿ. ವೆಂಕಟೇಶ್ ಅಭಿನಂದಿಸಿದರು. ಸಹ ಕುಲಪತಿಗಳಾದ ಡಾ. ಶರತ್ ರಾವ್ (ಆರೋಗ್ಯ ವಿಜ್ಞಾನ), ಡಾ. ದಿಲೀಪ್ ನಾಯಕ್ (ಮಂಗಳೂರು ಕ್ಯಾಂಪಸ್), ಡಾ. ನಾರಾಯಣ ಸಭಾಹಿತ್ (ತಂತ್ರಜ್ಞಾನ ಮತ್ತು ವಿಜ್ಞಾನ), ಪ್ರೊ. ಮಧು ವೀರರಾಘವನ್ (ಬೆಂಗಳೂರು ಕ್ಯಾಂಪಸ್) ಮತ್ತು ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಟ್ಯಾಪ್ಮಿಯ ಪ್ರಭಾರ ನಿರ್ದೇಶಕ ಡಾ. ದುರ್ಗಾ ಪ್ರಸಾದ್ ಅವರು ಸಂಸ್ಥೆಯ ವಾರ್ಷಿಕ ಶೈಕ್ಷಣಿಕ ವರದಿ ಮಂಡಿಸಿದರು.