ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡ ಗ್ರಾಮಗಳಿಗೆ ನೀರು ಪೂರೈಸಲು, ಶಿಥಿಲ ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ಥಿ ಕಾರ್ಯವನ್ನು ಇನ್ನು ಒಂದು ತಿಂಗಳಲ್ಲೇ ಪೂರ್ಣಗೊಳಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದ್ದಾರೆ.ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳಿಂದ ಮಾಯಕೊಂಡ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡ ಗ್ರಾಮಗಳಿಗೆ ನೀರು ಪೂರೈಸುವ ಕೆಲಸ ಪ್ರಥಮಾದ್ಯತೆ ಮೇಲಾಗಬೇಕು ಎಂದರು.
ಮಾಯಕೊಂಡ ಕ್ಷೇತ್ರದ ಗ್ರಾಮಗಳಲ್ಲಿ ಜಲಜೀವನ ಮಿಷನ್ ಕಾಮಗಾರಿ ಬಾಕಿ ಉಳಿದ ಕಡೆಗಳಲ್ಲೂ ತ್ವರಿತವಾಗಿ ಕೆಲಸ ಮುಗಿಸಬೇಕು. ಕ್ಷೇತ್ರದಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಟಾನ ಮಾಡುತ್ತಿರುವ ಕಾಮಗಾರಿ ಪೂರ್ಣಗೊಳಿಸದೇ ಬಾಕಿ ಉಳಿಸಿಕೊಳ್ಳುವ ಮೂಲಕ ಅಧಿಕಾರಿಗಳು ಏನು ಸಾಧಿಸಲು ಹೊರಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.ಕುಡಿಯುವ ನೀರು, ಚರಂಡಿ, ಶಾಲಾ ಕಟ್ಟಡ, ರಸ್ತೆ, ಅಂಗನವಾಡಿ ಸೇರಿದಂತೆ ಕ್ಷೇತ್ರದ ಗ್ರಾಮಗಳಿಗೆ ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆ ಮೇಲೆ, ಕಾಲಮಿತಿಯಲ್ಲೇ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಿ. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಇಲ್ಲದೇ ಹಾಳಾಗಿರುವುದು ಕಂಡು ಬರುತ್ತಿದೆ. ನಲ್ಲಿ ಅಳವಡಿಸಿದ್ದರೂ ನೀರು ಪೂರೈಸುತ್ತಿಲ್ಲವೆಂದ ದೂರು ಕೇಳಿ ಬರುತ್ತಿದೆ ಎಂದು ಬೇಸರ ಹೊರ ಹಾಕಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಶಾಲೆಗಳಲ್ಲಿ ಭೋಜನಾಲಯ ಮತ್ತು ನೀರು ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡು, ಪೂರ್ಣಗೊಳಿಸಬೇಕು. ಮನೆಗಳಿಗೆ ನಲ್ಲಿ ಅಳವಡಿಸುವಾಗ ಪ್ರತಿ ಮನೆಗಳ ಸರ್ವೇ ಮಾಡಿ, ನಲ್ಲಿ ಸಂಪರ್ಕ ಕಲ್ಪಿಸಬೇಕು. ಗುಣಮಟ್ಟದ ಪೈಪ್‌ಲೈನ್ ಅಳವಡಿಸಿ, ಪೈಪ್ ಲೈನ್ ಕಾಮಗಾರಿ ನಂತರ ಗುಂಡಿಯನ್ನು ಸರಿಯಾಗಿ ಮುಚ್ಚಬೇಕು ಎಂದು ಸೂಚಿಸಿದರು.ಕಾಂಕ್ರೀಟ್ ರಸ್ತೆಗಳಾಗಿದ್ದರೆ ಪುನಾ ಕಾಂಕ್ರೀಟ್ ಹಾಕಿ, ಸಮತಟ್ಟು ಮಾಡಬೇಕು. ಕಳಪೆ ಕಾಮಗಾರಿ ಕೈಗೊಂಡರೆ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ. ಅದಕ್ಕೆಲ್ಲಾ ಅವಕಾಶ ಕೊಡದೇ, ಸರಿಯಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಂಜಿನಿಯರ್ ಮಾತನಾಡಿ, ಜೆಜೆಎಂ ಯೋಜನೆಯಡಿ ಮೊದಲ ಹಂತದ ಕಾಮಗಾರಿಯಲ್ಲಿ 14, 2ರಲ್ಲಿ 39, ಮೂರರಲ್ಲಿ 27, ನಾಲ್ಕರಲ್ಲಿ 5 ಕಾಮಗಾರಿ ಪೂರ್ಣಗೊಂಡಿವೆ ಎಂದು ಶಾಸಕರ ಗಮನಕ್ಕೆ ತಂದರು. ಅದಕ್ಕೆ ಬಸವಂತಪ್ಪ, ಬಾಕಿ ಇರುವ 46 ಕಾಮಗಾರಿಗಳನ್ನು ಇನ್ನು ಒಂದೂವರೆ ತಿಂಗಳಲ್ಲೇ ಪೂರ್ಣಗೊಳಿಸಬೇಕು. ಕಾಮಗಾರಿ ಟೆಂಡರ್ ಆಗಿದ್ದರೂ, ಕೆಲಸ ಯಾಕೆ ಆರಂಭಿಸುತ್ತಿಲ್ಲ. ಟೆಂಡರ್ ಮಾಡಿದ ಎಲ್ಲಾ ಕಾಮಗಾರಿ ಕೈಗೊಳ್ಳುವ ಮುನ್ನ ನನ್ನ ಗಮನಕ್ಕೆ ತಂದು, ತ್ವರಿತವಾಗಿ ಅನುಷ್ಟಾನಗೊಳಿಸಬೇಕು ಎಂದರು.ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್ ಮಾತನಾಡಿ, ಗ್ರಾಪಂಗಳಲ್ಲಿ ಎಷ್ಟು ಖಾತೆಗಳಿವೆಂಬುದನ್ನು ಪರಿಶೀಲಿಸಿ, ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿಕೊಳ್ಳಬೇಕು. ಬ್ಯಾಂಕ್ ಖಾತೆಯ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಪರಿಶೀಲನೆ ಮಾಡಿಕೊಳ್ಳಲು ಸೂಚಿಸಿದರು.
ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.