ಹೊಸಪೇಟೆ: ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಅಲ್ಲದೇ ಇದು ಕ್ಯಾನ್ಸರ್ ವಿರುದ್ಧ ರಾಮಬಾಣವಾಗಿದೆ. ಮನದಲ್ಲಿರುವ ಗೊಂದಲಗಳನ್ನು ಬದಿಗಿರಿಸಿ ಧೈರ್ಯವಾಗಿ ಲಸಿಕೆ ಪಡೆಯಿರಿ ಎಂದು ವೈದ್ಯೆ ಡಾ.ಅಂಜನಾ, ಡಾ.ದಿವ್ಯಶ್ರೀ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಭಾರತೀಯ ರೆಡ್ ಕ್ರಾಸ್ ಘಟಕ ಆಯೋಜಿಸಿದ್ದ ಎಚ್‌ಪಿವಿ ಲಸಿಕಾ ಜಾಗೃತಿ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದರು.

ಸುಶ್ರೂಷಾ ಆಸ್ಪತ್ರೆಯ ವೈದ್ಯ ಡಾ. ಅಂಜನಾ ಮಾತನಾಡಿ, ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಸೋಂಕಿನಿಂದ ಗರ್ಭಕಂಠದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ. ದೇಶದಲ್ಲಿ ಪ್ರತಿವರ್ಷ ಸಾವಿರಾರು ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. 2024ನೇ ಸಾಲಿನ ವರದಿ ಪ್ರಕಾರ ದೇಶದಲ್ಲಿ 75 ಸಾವಿರ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗಿದ್ದು, 42 ಸಾವಿರ ಮಹಿಳೆಯರು ಈ ಕಾಯಿಲೆಯಿಂದ ಸಾವನ್ನಪ್ಪಿರುವುದು ಶೋಚನೀಯ ಸಂಗತಿ. ವೈದ್ಯಕೀಯ ವಿಜ್ಞಾನ ಅತ್ಯಂತ ವೇಗವಾಗಿ ಮುಂದುವರೆದಿದ್ದರೂ ಇಂದಿಗೂ ಗೊಡ್ಡು ಮೌಢ್ಯಗಳಿಂದ ಜೀವ ಬಲಿಯಾಗುತ್ತಿರುವುದು ದುಃಖಕರವಾಗಿದೆ ಎಂದರು.

ಈ ವೈರಸ್ ಸಾಮಾನ್ಯವಾಗಿ ಲೈಂಗಿಕ ಸಂಪರ್ಕದ ಮೂಲಕ ಹರಡುವ ಸಾಧ್ಯತೆ ಇದ್ದು, 35 ರಿಂದ 75 ವರ್ಷದ ಮಹಿಳೆಯರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಸಾಮಾನ್ಯ ರಕ್ತಸ್ರಾವ, ಅಥವಾ ಸ್ರಾವ ಸೇರಿದಂತೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ 35 ವರ್ಷ ವಯಸ್ಸಿನ ನಂತರ ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಾದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ದಿವ್ಯಶ್ರೀ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್‌ಗೆ ತಡೆಗಟ್ಟುವ ಲಸಿಕೆ ಲಭ್ಯವಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ. 9ರಿಂದ 26 ವರ್ಷದೊಳಗಿನ ಹೆಣ್ಣು ಮಕ್ಕಳು ಲಸಿಕೆ ಹಾಕಿಸುವುದು ಅತ್ಯಂತ ಪರಿಣಾಮಕಾರಿ. ಈ ವಯಸ್ಸಿನಲ್ಲಿ ಎರಡು ಡೋಸ್ ನೀಡಲಾಗುತ್ತದೆ. ನಂತರದ ವಯಸ್ಸಿನಲ್ಲಿ ಮೂರು ಡೋಸ್ ನೀಡಲಾಗುತ್ತದೆ. ಈ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಈಗಾಗಲೇ ವಿಶ್ವಾದ್ಯಂತ ಕೋಟ್ಯಂತರ ಜನರಿಗೆ ನೀಡಲಾಗಿದೆ. ಯಾವುದೇ ಗಂಭೀರ ದುಷ್ಪರಿಣಾಮಗಳು ಕಂಡುಬಂದಿಲ್ಲ ಎಂದು ವಿವರಿಸಿದರು.


ಸರ್ಕಾರ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದು, 14-15 ವರ್ಷದೊಳಗಿರುವ ಬಾಲಕಿಯರು ಪಡೆಯಬಹುದು. ಇದರಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ಸುರಕ್ಷಿತವಾಗಿರಲು ಸಾಧ್ಯವಿದ್ದು, ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆಯು ಉಚಿತವಾಗಿ ಲಭ್ಯವಿದೆ ಎಂದು ಹೇಳಿದರು.

ನಂತರ ವೈದ್ಯರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಲಸಿಕೆ ಬಗ್ಗೆ ಇರುವ ಮೂಢನಂಬಿಕೆಗಳನ್ನು ದೂರ ಮಾಡಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ರವಿಶಂಕರ್, ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್, ರಾಜ್ಯ ಸಮಿತಿ ಸದಸ್ಯೆ ಅನ್ನಪೂರ್ಣ ಸದಾಶಿವ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತ್ಯನಾರಾಯಣ, ಪ್ರಭಾಕರ್, ಮಹೇಂದ್ರ ಕುಮಾರ್ ಸೋನಿ, ಬಿಂಧು ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕರಾದ ವೆಂಕಟೇಶ್ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿ ಕಲ್ಪನಾಳ ಚಾತುರ್ಯಕ್ಕೆ ಮೆಚ್ಚಿ ಅಧ್ಯಕ್ಷರಾದ ರವಿಶಂಕರ್ ಅವರು ಸಾವಿರ ನಗದು ಬಹುಮಾನ ನೀಡಿದರು.