ಹವ್ಯಕ ಸಮಾಜ ಕೇವಲ ಪ್ರತಿಭೆಯಿಂದಲೆ ಜಾಗತಿಕ ಮನ್ನಣೆ ಪಡೆದುಕೊಂಡಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಹವ್ಯಕ ಸಮಾಜ ಕೇವಲ ಪ್ರತಿಭೆಯಿಂದಲೆ ಜಾಗತಿಕ ಮನ್ನಣೆ ಪಡೆದುಕೊಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮೈಸೂರಿನ ನೋಟ್ ಪೇಪರ್ ಮಿಲ್ ಮುಖ್ಯ ಮಹಾಪ್ರಬಂಧಕ ಅನಂತ ಹೆಗಡೆ ಹೇಳಿದರು.ಕುಮಟಾ ಹವ್ಯಕ ಸಭಾಂಗಣದಲ್ಲಿ ಶನಿವಾರ ಹವ್ಯಕ ವಿದ್ಯಾವರ್ಧಕ ಸಂಘದ 31ನೇ ಹವ್ಯಕ ಸಮ್ಮೇಲನದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಮಹಾಸಭೆಯ ಫಲಕ ಅನಾವರಣಗೊಳಿಸಿ ಮಾತನಾಡಿದರು.
ಯಾವ ಸಮಾಜದಲ್ಲಿ ಮಹಿಳೆಯರು ಮುಂದೆ ಬರುತ್ತಾರೋ, ಮಹಿಳೆಯರಿಗೆ ಉನ್ನತ ಸ್ಥಾನಮಾನ ಸಿಗುತ್ತದೋ ಆ ಸಮಾಜ ಮುಂದೆ ಬರುತ್ತದೆ. ಇದಕ್ಕೆ ಹವ್ಯಕ ಸಮಾಜವೇ ನಿದರ್ಶನ ಎಂದು ಅಭಿಪ್ರಾಯಪಟ್ಟರು.ಸಮಾಜದ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಹವ್ಯಕ ವಿದ್ಯಾವರ್ಧಕ ಸಂಘದ ಕಾರ್ಯ ಶ್ಲಾಘನೀಯ. ಸಮಾಜದ ಪ್ರತಿಭಾವಂತರು ನಾಡಿಗೆ, ದೇಶಕ್ಕೆ ಬಹು ದೊಡ್ಡ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.
ಆಧ್ಯಕ್ಷತೆ ವಹಿಸಿದ್ದ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ,ಹವ್ಯಕ ವಿದ್ಯಾವರ್ಧಕ ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ನಮಗೆ ಮುಖ್ಯ. ಸಂಘದಲ್ಲಿ 1.25 ಕೋಟಿ ರು. ಠೇವಣಿ ಇದ್ದು, ಅದೆಲ್ಲ ಈ ಸಮಾಜಕ್ಕೆ ಸೇರಿದ್ದು. ನಮ್ಮ ಸಂಸ್ಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ಎನ್. ಹೆಗಡೆ ಸ್ವಾಗತಿಸಿ, ಸಂಘ ನಡೆದುಬಂದ ದಾರಿಯನ್ನು ಸ್ಮರಿಸಿದರು. ಸಂಘದ ಕಾರ್ಯದರ್ಶಿ ಮಧು ಹೆಗಡೆ ಪರಿಚಯಿಸಿದರು.ಹವ್ಯಕ-ಸಂಸ್ಕೃತ-ಸಂಸ್ಕೃತಿ ಒಂದು ಅವಲೋಕನ ಕುರಿತು ವೇ. ಮೂ. ಗಣೇಶ್ವರ ಸಾಂಬ ದೀಕ್ಷಿತ್ ಹಾಗೂ ಮಹಿಳೆ ಮತ್ತು ಉದ್ಯಮ ಕುರಿತು ಜಯಾ ವಿ. ಹೆಗಡೆ ಉಪನ್ಯಾಸ ನೀಡಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಶ್ಯಾಮಲಾ ಸುಬ್ರಾಯ ಹೆಗಡೆ,ಶಿಕ್ಷಕರ ಜಿಲ್ಲಾ ಮಟ್ಟದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ನರೇಶ ಎಂ. ಹೆಗಡೆ, ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ
ಭೂಮಿಕಾ ನಾಗರಾಜ ಹೆಗಡೆ, ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಡಾ. ಪ್ರತಿಭಾ ಭಟ್ ಅವರನ್ನು ಸತ್ಕರಿಸಲಾಯಿತು.ಡಾ. ಪಲ್ಲವಿ ಅಶ್ವತ್ ನಿರ್ದೇಶನದಲ್ಲಿ ಶ್ರೀನಿಕೇತನ ನೃತ್ಯ ಕಲಾಕೇಂದ್ರ ಕುಮಟಾ ವಿದ್ಯಾರ್ಥಿಗಳಿಂದ ಭರತ ನಾಟ್ಯ, ನೃತ್ಯ-ರೂಪಕ ಹಾಗೂ ಮಂಗಲಮೂರ್ತಿ ಕಲಾ ಬಳಗ, ಕುಮಟಾ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಸಮ್ಮೇಳನದ ಅಂಗವಾಗಿ ಹವ್ಯಕ ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳು ಜನಮೆಚ್ಚುಗೆ ಗಳಿಸಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.