ಅಂಗನವಾಡಿಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ
ಕುಷ್ಟಗಿ: ಮನೆಗಳಲ್ಲಿ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವ ಬದಲಿಗೆ ಸಣ್ಣ ಚಟುವಟಿಕೆ ಮಾಡಿಸುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಮೆಣೆದಾಳ ಗ್ರಾಪಂ ಪಿಡಿಒ ಮಹಾಂತೇಶ ಗೋಡೆ ಹೇಳಿದರು.
ತಾಲೂಕಿನ ಹುಲಿಯಾಪುರು ಗ್ರಾಮದ ಯಮನೂರ ಪಾಷಾ ದರ್ಗಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಮಾದರಿಯಾಗಿದ್ದು ಪಠ್ಯ ಕ್ರಮದಂತೆ ಚಟುವಟಿಕೆ ಅನುಷ್ಠಾನ ಮಾಡಲಾಗುತ್ತಿದ್ದು ವಿನೂತನ ಕಾರ್ಯಕ್ರಮ ಅಂಗನವಾಡಿ ಮಕ್ಕಳ ಪೋಷಕರಿಗಾಗಿ ಮಾಡಲಾಗುತ್ತಿದ್ದು, ಬಾಲಮೇಳ ಕಾರ್ಯಕ್ರಮ ಮಕ್ಕಳ ಕಲಿಕೆ ಮತ್ತು ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದರು.ಅಂಗನವಾಡಿ ಸೂಪರವೈಸರ್ ಅನ್ನಪೂರ್ಣ ಪಾಟೀಲ ಮಾತನಾಡಿ, ಅಂಗನವಾಡಿಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ನೀಡುವುದು ಅತ್ಯವಶ್ಯಕವಾಗಿದೆ. ಮಕ್ಕಳ ಕಲಿಕೆಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಚಟುವಟಿಕೆ ಮೂಲಕ ಶಿಕ್ಷಣ ನೀಡುವದರಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ ಎಂದರು.
ಆಕರ್ಷಕ ಸ್ಟಾಲ್ :ಹುಲಿಯಾಪೂರದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮದಲ್ಲಿ ಶಾಲಾಪೂರ್ವ ಶಿಕ್ಷಣದ ಚಟುವಟಿಕೆಗಳಾದ ಅಂಗನವಾಡಿಯ ನಿಯಮ, ಆಕಾರಗಳ ಪರಿಚಯ, ಬಣ್ಣಗಳ ಪರಿಚಯ, ಇಂದಿನ ಕ್ಯಾಲೆಂಡರ್ ಚಟುವಟಿಕೆಗಳ ಪ್ರದರ್ಶನ ವೀಕ್ಷಿಸಿದರು.ಬಾಲಮೇಳ ಕಾರ್ಯಕ್ರಮದ ನಿಮಿತ್ತ ಪಾಲಕರಿಗೆ ಆಟ ಆಡಿಸಲಾಯಿತು, ಶಾಲಾ ಪೂರ್ವ ಶಿಕ್ಷಣ ಸ್ಟಾಲ್, ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವೇಷ ಭೂಷಣ ಹಾಗೂ ಮಕ್ಕಳು ಅಂಗನವಾಡಿಯಲ್ಲಿ ಕಲಿತ ಚಟುವಟಿಕೆ ಪ್ರಸ್ತುತ ಪಡಿಸುವಿಕೆ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಮೆಣೆದಾಳ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಭಜಂತ್ರಿ, ಅಜಿಂ ಪ್ರೇಮ್ ಜಿ ಫೌಂಡೇಶನ್ ಜಿಲ್ಲಾ ಸಂಯೋಜಕ ಚಿಕ್ಕವಿರೇಶ, ಚಾಂದಬಿ ಮುರ್ತುಜಾಸಾಬ್, ಹುಸೇನಬಿ ಕರಿಂಸಾಬ್, ಲಕ್ಷ್ಮವ್ವ ಹನಮಗೌಡ್ರ, ಚಂದ್ರಶೇಖರ ಯರಗೇರಾ, ಗೋಪಾಲ ರಾಠೋಡ, ಸೀತಮ್ಮ ಬಚನಾಳ ಸೇರಿದಂತೆ ಹಿರೇಮನ್ನಾಪೂರ ಬಿ ವಲಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಂಗನವಾಡಿ ಕೇಂದ್ರದ ಮಕ್ಕಳು ಹಾಗೂ ಪಾಲಕರು ಪೋಷಕರು ಭಾಗವಹಿಸಿದ್ದರು.