ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಅಕ್ಕಮಹಾದೇವಿ ಉಪನ್ಯಾಸ ನೀಡಿ ಮಾತನಾಡಿ, ಸಂಕ್ರಾಂತಿ ಹಬ್ಬವು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಬಲಪಡಿಸುವ ಹಬ್ಬವಾಗಿದೆ.
ಕಂಪ್ಲಿ: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ಬಣಜಿಗ ಮಹಿಳಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವು ಶನಿವಾರ ಸಂಸ್ಕೃತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಜರುಗಿತು.ಮಹಿಳೆಯರು ಪರಸ್ಪರ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡು, ಪರಂಪರೆಯ ಉಡುಪು ತೊಟ್ಟು, ಎಳ್ಳು–ಬೆಲ್ಲ ವಿತರಣೆ ಮಾಡಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಅಕ್ಕಮಹಾದೇವಿ ಉಪನ್ಯಾಸ ನೀಡಿ ಮಾತನಾಡಿ, ಸಂಕ್ರಾಂತಿ ಹಬ್ಬವು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಬಲಪಡಿಸುವ ಹಬ್ಬವಾಗಿದೆ. ಮಹಿಳೆಯರು ಸಂಸ್ಕೃತಿ, ಸಂಪ್ರದಾಯ ಹಾಗೂ ಕುಟುಂಬ ಮೌಲ್ಯಗಳನ್ನು ತಲೆಮಾರಿಂದ ತಲೆಮಾರಿಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಮಾಜದ ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಯ ಅಗತ್ಯವಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪ್ಲಿ ತಾಲೂಕು ಬಣಜಿಗ ಸಮಾಜ ಮಹಿಳಾ ಸಂಘದ ಅಧ್ಯಕ್ಷೆ ಚೈತ್ರ ಗಡಾದ್ ವಹಿಸಿ ಮಾತನಾಡಿ, ಮಹಿಳಾ ಸಂಘವು ಸಮಾಜದ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಅವರ ವ್ಯಕ್ತಿತ್ವ ವಿಕಸನ, ಸಾಂಸ್ಕೃತಿಕ ಅರಿವು ಹಾಗೂ ಸಾಮಾಜಿಕ ಜಾಗೃತಿಗೆ ಸದಾ ಶ್ರಮಿಸುತ್ತಿದೆ. ಇಂತಹ ಹಬ್ಬಗಳ ಆಚರಣೆಗಳಿಂದ ನಮ್ಮ ಸಂಸ್ಕೃತಿ ಜೀವಂತವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಕುಂತಲಾ ವಾಲಿ ಉಪಸ್ಥಿತರಿದ್ದು, ಮಹಿಳೆಯರು ಸಮಾಜದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ಬಣಜಿಗ ಸಮಾಜದ ಅಧ್ಯಕ್ಷರಾದ ಪ್ರಸಾದ್ ಗಡಾದ್, ಸಂಘದ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಮರಿ ಶೆಟ್ರು, ವಿನುತಾ ಯುಗಾದಿ, ಶರಣಮ್ಮ ಕೋರಿ, ಪಾರ್ವತಮ್ಮ ಬೂದಗುಂಪಿ, ಶಾಂತಮ್ಮ ಮರ್ತೂರ್, ಟಿ. ಈರಮ್ಮ, ಸುಧಾ ಮರ್ತೂರ್, ಸೌಮ್ಯ ಪಟ್ಟೇದ್ ಸೇರಿದಂತೆ ಮುಖಂಡರಾದ ಸುರೇಶ್ ಗೌಡ, ಯುಗಾದಿ ಶಿವರಾಜ್, ಶಿವಾನಂದ ಬೂದಗುಂಪಿ, ಸಣ್ಣ ಶರಣಪ್ಪ ಕೋರಿ, ಎಚ್. ಎಸ್. ವೀರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನ್ನಪೂರ್ಣ ನಿರೂಪಿಸಿದರು. ಜಿ.ಕೊಟ್ರಮ್ಮ ವಂದಿಸಿದರು.