ಸಾರಾಂಶ
ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕೆರೆಯಲ್ಲಿ ವರ್ಣರಂಜಿತ ಅಬ್ಬರದ ನಡುವೆ ವಿಸರ್ಜನೆ
ಕನ್ನಡಪ್ರಭ ವಾರ್ತೆ ತುಮಕೂರುಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.ಬಲಿಪಾಢ್ಯಮಿಯಂದು ಇತಿಹಾಸ ಪ್ರಸಿದ್ಧ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಂಭಿಸಲಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ವರ್ಣರಂಜಿತ ಅಬ್ಬರದ ನಡುವೆ ಗಣೇಶಮೂರ್ತಿಯನ್ನು ವಿಸರ್ಜಿಸಲಾಯಿತು.
ಎರಡು ದಿನಗಳ ಕಾಲ ನಡೆದ ಗೂಳೂರು ಗಣೇಶ ಜಾತ್ರೆಯಲ್ಲಿ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಭಾನುವಾರ ಬೆಳಗಿನ ಜಾವ 3 ಗಂಟೆಗೆ ಹೊನ್ನೇನಹಳ್ಳಿಯ ಭೋವಿ ಸಮುದಾಯ ಸೇರಿದಂತೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ಬೃಹತ್ ಗಣೇಶಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾಮಕಟ್ಟೆ ವೃತ್ತದಲ್ಲಿ ಮುಂಜಾನೆ 4.30 ರ ಸಮಯದಲ್ಲಿ ಹಸಿರು ಪಟಾಕಿ ಸಿಡ್ಡಿ ಮದ್ದಿನ ಸುರಿಮಳೆಗೈಯ್ಯಲಾಯಿತು.ರಾತ್ರಿ ಮೂರು ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ವಿವಿಧ ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳಾದ ಕೀಲು ಕುದುರೆ, ಡೊಳ್ಳುಕುಣಿತ, ಚಂಡೆವಾದ್ಯ, ಕೋಲಾಟ, ಗಾರುಡಿ ಗೊಂಬೆಗಳ ನೃತ್ಯ, ನಾಸಿಕ್‌ಡೋಲ್, ಮಂಗಳವಾದ್ಯ ಹಾಗೂ ಅಕರ್ಷಕ ಸಿಡಿ ಮದ್ದಿನ ಪ್ರದರ್ಶನದ ನಡುವೆ ಸ್ವಾಮಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಉತ್ಸವದ ನಂತರ ಊರಿನ ಮಧ್ಯಭಾಗದಲ್ಲಿ ರಥವನ್ನು ಕೆಲ ಕಾಲ ಸಾರ್ವಜನಿಕ ಮತ್ತು ಭಕ್ತರ ದರ್ಶನಕ್ಕಾಗಿ ನಿಲ್ಲಿಸಲಾಗಿತ್ತು.
ಭಾನುವಾರ ಮಧ್ಯಾಹ್ನ 12.30 ರಿಂದ ಊರಿನ ಪ್ರಮುಖ ಬೀದಿಗಳಲ್ಲಿ ಗಣೇಶಮೂರ್ತಿಯ ಮೆರವಣಿಗೆ ಆರಂಭವಾಯಿತು. ಗ್ರಾಮದ ಮಹಿಳೆಯರು ತಮ್ಮ ಮನೆಗಳ ಮುಂದೆ ತಳಿರು, ತೋರಣಗಳಿಂದ ಸಿಂಗರಿಸಿ, ಬಣ್ಣ, ಬಣ್ಣದ ರಂಗೋಲಿ ಹಾಕಿ ಗಣೇಶಮೂರ್ತಿಗೆ ಹಣ್ಣು, ಕಾಯಿ, ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಕೃತಾರ್ಥರಾದರು. ಮಧ್ಯಾಹ್ನ ಮೂರು ಗಂಟೆಯವರಗೆ ಮೆರವಣಿಗೆ ನಡೆಸಿದ ನಂತರ, ಭಾನುವಾರ ಸಂಜೆ ಗೂಳೂರು ಕೆರೆಯಲ್ಲಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಯಿತು.ಗೂಳೂರು ಶ್ರೀ ಮಹಾಗಣಪತಿ ಭಕ್ತಮಂಡಳಿಯ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ವಿಸರ್ಜನಾ ಮಹೋತ್ಸವದಲ್ಲಿ ನಾಡಿನ ವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.ಬಾಕ್ಸ್..........ಶನಿಪ್ರಭಾವ ನಾಟಕದ ಪ್ರದರ್ಶನ ಇಂದು
ಗೂಳೂರು ಗಣೇಶ ಜಾತ್ರಾ ಮಹೋತ್ಸವದ ಆಂಗವಾಗಿ ಡಿ. 18. ಸೋಮವಾರ ರಂದು ಬೆಳಿಗ್ಗೆ 11 ಗಂಟೆಗೆ ಗೂಳೂರು ಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಅಬ್ಬಯ್ಯನಾಯ್ಡು ಕಲಾ ಸಂಘದ ವತಿಯಿಂದ ಭಕ್ತ ಪ್ರಧಾನ ಪೌರಾಣಿಕ ನಾಟಕ ನಲ್ಲತಂಗ ಅಥವಾ ಶನಿಪ್ರಭಾವ ಎಂಬ ನಾಟಕದ ಪ್ರದರ್ಶನವನ್ನು ಸಂಗೀತ ನಿರ್ದೇಶಕರಾದ ಎಸ್.ಎಲ್. ಲಕ್ಷ್ಮೀನಾರಾಯಣ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿ ನಾಟಕವನ್ನು ವೀಕ್ಷಿಸಿ ಯಶಸ್ವಿಗೊಳಿಸುವಂತೆ ಗೂಳೂರು ಶ್ರೀ ಮಹಾಗಣಪತಿ ಭಕ್ತಮಂಡಳಿಯ ಶಿವಕುಮಾರ್ ಮನವಿ ಮಾಡಿದ್ದಾರೆ.