ಕಾರವಾರ: ಶಿರಸಿ ತಾಲೂಕಿನ ಸೋಂದಾ ಗ್ರಾಪಂ ವ್ಯಾಪ್ತಿಯ ಸ್ವರ್ಣವಲ್ಲೀ ಮಠವು ತನ್ನ ಆವರಣದಲ್ಲಿ ನಿರ್ಮಿಸಲಾದ ಗೋಬರ್ ಧನ್ ಘಟಕದಿಂದ ಗ್ಯಾಸ್ ಸಿಲಿಂಡರ್ ಅಗತ್ಯ ಇಲ್ಲದೆ ಅನ್ನದಾಸೋಹ ನಡೆಯುತ್ತಿದೆ. ಗ್ಯಾಸ್ ಸಿಲಿಂಡರ್ ಕೊರತೆಗೆ ಇದು ಉತ್ತಮ ಪರಿಹಾರ ಒದಗಿಸಿದೆ.
ಮಠವು ಗೋಶಾಲೆ ಹೊಂದಿದ್ದು, ಈ ಗೋಶಾಲೆಯಲ್ಲಿ ದೇಶೀಯ ತಳಿಯ 80ಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಪ್ರತಿದಿನ ಮಠಕ್ಕೆ ಆಗಮಿಸುವ ಭಕ್ತರು ಹಾಗೂ ಪಾಠ ಶಾಲೆಯಲ್ಲಿ 180ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ನದಾಸೋಹ ನಡೆಯುತ್ತಿದೆ. ವಿವಿಧ ಹಬ್ಬ-ಹರಿದಿನಗಳ ಸಮಯದಲ್ಲಿ ಹಾಗೂ ಜಯಂತಿಗಳು, ನವರಾತ್ರಿ ಉತ್ಸವ ಇತರ ವಿಶೇಷ ದಿನಗಳಲ್ಲಿ 2000ಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ನಡೆಯುತ್ತದೆ.ಪ್ರತಿದಿನ ಈ ಗೋಶಾಲೆಯಲ್ಲಿ 350ದಿಂದ 400 ಕೆಜಿಗೂ ಹೆಚ್ಚು ಸಗಣಿ ಸಂಗ್ರಹ ಆಗುತ್ತಿರುವುದನ್ನು ಮನಗಂಡು 2024-25ನೇ ಸಾಲಿನಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ, ಈ ಗೋಶಾಲೆಯಲ್ಲಿ ಪ್ರತ್ಯೇಕವಾಗಿ 40 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಗೋಬರ್‌ಧನ್ ಘಟಕ ನಿರ್ಮಿಸಲಾಯಿತು. ಈ ಘಟಕ ನಿರ್ಮಾಣಕ್ಕೆ ಒಟ್ಟು ₹11.05 ಲಕ್ಷ ಖರ್ಚು ಮಾಡಲಾಗಿದ್ದು, ಅದರಲ್ಲಿ ₹10.45 ಲಕ್ಷಗಳನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಭರಿಸಿದರೆ ಉಳಿದ ಘಟಕ ನಿರ್ಮಾಣ ಮೊತ್ತವನ್ನು ಮಠವೇ ಭರಿಸಿದೆ. ಇದೀಗ ಗೋಶಾಲೆಯಲ್ಲಿ ಸಂಗ್ರಹವಾಗುವ ಸಗಣಿಯಲ್ಲಿ ಪ್ರತಿ ದಿನ 350ರಿಂದ 400 ಕೆಜಿಗಳಷ್ಟು ಸಗಣಿಯನ್ನು ಗೋಬರ್‌ಧನ್ ಘಟಕಕ್ಕೆಂದೇ ಬಳಸಿಕೊಂಡು, ಪ್ರತಿದಿನ 15ರಿಂದ 18 ಕೆಜಿಗಳಷ್ಟು ಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ.
ಈ ಮೊದಲು ಅನ್ನದಾಸೋಹಕ್ಕೆಂದೇ ಎಲ್.ಪಿ.ಜಿ. ಸಿಲಿಂಡರ್‌ಗೆ ಪ್ರತಿ ವರ್ಷ ₹2ರಿಂದ ₹2.50 ಲಕ್ಷಗಳನ್ನು ಖರ್ಚು ಮಾಡಲಾಗುತ್ತಿತ್ತು. ಇದೀಗ ಈ ಹಣ ಸಂಪೂರ್ಣ ಉಳಿತಾಯವಾಗುತ್ತಿದೆ. ಘಟಕದಿಂದ ಹೊರಬರುವ ಸಗಣಿಯಿಂದ ಸಾವಯವ ಗೊಬ್ಬರವನ್ನೂ ತಯಾರು ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಸಮುದಾಯ ಹಂತದಲ್ಲಿ ಕಾರ್ಯನಿರ್ವಹಿಸುವ ಅನ್ನದಾಸೋಹ ಕೇಂದ್ರ, ಸಮುದಾಯ ಭವನಗಳಲ್ಲಿ, ಗೋಶಾಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಎಂ.ಎಸ್. ಅಲ್ಲಾಭಕ್ಷ ತಿಳಿಸಿದ್ದಾರೆ.
ಮಠದ ಗೋಶಾಲೆಗೆ ಸರ್ಕಾರದಿಂದ ನೀಡಿರುವ ಸಮುದಾಯ ಹಂತದ ಗೋಬರ್ ಗ್ಯಾಸ್ ಘಟಕವು ಅತ್ಯಂತ ಉಪಯುಕ್ತವಾಗಿದೆ. ಸಿಲಿಂಡರ್ ಕೊರತೆಯ ಸಂದರ್ಭದಲ್ಲಿ ಅನುಕೂಲವಾಗಲಿದೆ. ಪರಿಸರಸ್ನೇಹಿಯಾದ ಇಂತಹ ಯೋಜನೆಯನ್ನು ಅನ್ನದಾಸೋಹ ನಡೆಯುವ ಮಠ, ಸಂಸ್ಥೆಗಳಿಗೆ ನೀಡಿದರೆ ಅತ್ಯಂತ ಉಪಯುಕ್ತವಾಗುತ್ತದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ಜಿಲ್ಲೆಯಲ್ಲಿ ಒಟ್ಟು ಐದು ಗೋಬರ್ಧನ್ ಘಟಕ ನಿರ್ಮಾಣ ಮಾಡಲಾಗಿದೆ. ಈ ಪೈಕಿ ಕಳೆದ ಸಾಲಿನಲ್ಲಿ ಸ್ವರ್ಣವಲ್ಲೀ ಮಠಕ್ಕೆ ಘಟಕ ಮಂಜೂರು ಮಾಡಲಾಗಿತ್ತು. ಇದರಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆ ಕಡಿಮೆ ಆಗುವುದಲ್ಲದೆ ಮಠಕ್ಕೂ ಸಹ ಹಣಕಾಸಿನ ಉಳಿತಾಯವಾಗುತ್ತಿದೆ. ಈ ಯೋಜನೆಯ ಪ್ರಗತಿಯಲ್ಲಿ ನಮ್ಮ ಜಿಲ್ಲೆಯು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಜಿಪಂ ಸಿಇಒ ಡಾ. ದಿಲೀಷ್ ಸಶಿ ಹೇಳಿದರು.