ಯಲಬುರ್ಗಾ: ತಾಲೂಕಿನ ಹುಣಸಿಹಾಳ ಗ್ರಾಮದ ಗ್ರಾಮದೇವತೆ ಶ್ರೀದ್ಯಾಮಾಂಬಿಕಾದೇವಿ ಜಾತ್ರೆ ಅದ್ಧೂರಿಯಾಗಿ ಜರುಗಿತು.
ಮೂರು ವರ್ಷಕ್ಕೊಮ್ಮೆ ನಡೆಯುವ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಊರಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು.ಜಾತ್ರೆ ಅಂಗವಾಗಿ ಶುಕ್ರವಾರ ಬೆಳಗ್ಗೆ ದೇವಿಗೆ ವಿಶೇಷ ಅಲಂಕಾರ, ಅಭಿಷೇಕದ ಪೂಜೆ ನೆರವೇರಿತು. ಕಾಯಿ ಕರ್ಪೂರ ಹಾಗೂ ನೈವೇದ್ಯ ಅರ್ಪಿಸಲಾಯಿತು.
ದೇವಿಗೆ ಉಡಿ ತುಂಬುವುದು ಸೇರಿ ನಾನಾ ಧಾರ್ಮಿಕ ಕಾರ್ಯಗಳು ಭಕ್ತಿಯಿಂದ ನಡೆದವು. ಭಕ್ತರು ಬೇಡಿಕೊಂಡ ಹರಕೆ ತೀರಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ದ್ಯಾಮಮ್ಮನ ಉತ್ಸವ ಮೂರ್ತಿಯ ಮೆರವಣಿಗೆಯು ಸೀಮೆಗೆ ತೆರಳಿ ವಾಪಸ್ಸು ದೇವಸ್ಥಾನಕ್ಕೆ ಆಗಮಿಸಿತು. ಹುಣಸಿಹಾಳ ಸೇರಿದಂತೆ ಸುತ್ತಲಿನ ಹಳ್ಳಿಗಳಾದ ನಿಲೋಗಲ್, ಗುನ್ನಾಳ, ಬೇವೂರು, ಮುರಡಿ, ನರಸಾಪುರ, ತರಲಕಟ್ಟಿ, ಕೋಳಿಹಾಳ, ಮ್ಯಾದನೇರಿ ಸೇರಿದಂತೆ ಹಲವು ಕಡೆಯಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಒಂಬತ್ತು ದಿನಗಳ ಕಾಲ ನಡೆದು ಬಂದ ಪುರಾಣ ಮಂಗಲಗೊಂಡಿತು.ರಾತ್ರಿ ವೇಳೆ ನಡೆದ ಹಾಸ್ಯಸಂಜೆ, ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಮತ್ತಷ್ಟು ಖುಷಿಯ ಸಂಭ್ರಮ ತರಿಸಿತು.
ಈ ಸಂದರ್ಭದಲ್ಲಿ ಹನುಮಂತ ತಳವಾರ್, ಅಯ್ಯನಗೌಡ ಕೆಂಚಮ್ಮನವರ್, ಶಿವಸಂಗಪ್ಪ ಹುಚನೂರ, ಗುರುರಾಜ ನೆಲಜೇರಿ, ಭೀಮನಗೌಡ ಪೊಲೀಸ್ ಪಾಟೀಲ್, ಹೇಮಣ್ಣಗೌಡ್ರ, ಶಿವಮೂರ್ತೆಪ್ಪ ಬಡಿಗೇರ್, ಚಂದ್ರಣ್ಣ ಬಡಿಗೇರ್, ರುದ್ರಪ್ಪ ಹುಚನೂರ, ಮೌನೇಶ ಬಡಿಗೇರ್, ಶಂಕ್ರಪ್ಪ ಬಡಿಗೇರ್, ಬಸಪ್ಪ ಹರಿಜನ ಸೇರಿದಂತೆ ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.