ಗದಗ: ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ಬೆಟಗೇರಿಯ ಟರ್ನಲ್ ಪೇಟೆಯ ದೇವರ ದಾಸಿಮಯ್ಯ ವೇದಿಕೆಯಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ನಡೆದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವರ ದಾಸಿಮಯ್ಯನವರು 10ನೇ ಶತಮಾನದಲ್ಲಿನ ವಚನಕಾರರು. ಇವರು ನೇಕಾರ ಕಾಯಕದ ಮೂಲಕ ಜೀವನ ಸಾಗಿಸುತ್ತಿದ್ದರು. ತಮ್ಮ ಅರ್ಥಪೂರ್ಣ ವಚನಗಳ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.
ತಮ್ಮ ವಚನಗಳಲ್ಲಿ ಭಕ್ತಿ ಹಾಗೂ ಕಾಯಕದ ಮಹತ್ವವನ್ನು ಸಾರಿದರು. ದೇವರ ದಾಸಿಮಯ್ಯನವರ ತತ್ವಾದರ್ಶಗಳನ್ನು ಹಾಗೂ ಅವರ ವಚನಗಳ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ರಾಘವೇಂದ್ರ ಕೊಪ್ಪಳ ಉಪನ್ಯಾಸ ನೀಡಿ, ಆದ್ಯ ವಚನಕಾರ ದೇವರ ದಾಸಿಮಯ್ಯನವರು 10ನೇ ಶತಮಾನದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಎಂಬ ಗ್ರಾಮದಲ್ಲಿ ಜನಿಸಿದರು. ಮುದನೂರು ಗ್ರಾಮದಲ್ಲಿ ಹಲವಾರು ದೇವಾಲಯಗಳಿದ್ದು, ಅದರಲ್ಲಿ ರಾಮಲಿಂಗೇಶ್ವರ ದೇವಸ್ಥಾನ ದೇವರ ದಾಸಿಮಯ್ಯನವರ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಇವರು ರಾಮಲಿಂಗೇಶ್ವರನ ಆರಾಧಕರಾಗಿದ್ದರು ಎಂದರು.ದೇವರ ದಾಸಿಮಯ್ಯನವರ ಅಂಕಿತನಾಮ ರಾಮನಾಥ ಆಗಿದೆ. ದಾಸಿಮಯ್ಯನ ಭಕ್ತಿಯಂತೆ ನಮ್ಮ ಭಕ್ತಿ ಇರಬೇಕು ಎಂದು ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ದೇವರ ದಾಸಿಮಯ್ಯನವರು ಮುದನೂರಿನ ಸಮೀಪದಲ್ಲಿರುವ ಶೈವ ಕೇಂದ್ರವಾಗಿದ್ದ ಶ್ರೀಶೈಲದಲ್ಲಿದ್ದ ಚಂದ್ರಗುಂಡ ಶಿವಾಚಾರ್ಯ ಗುರುಕುಲದಲ್ಲಿ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಪಡೆದು ಸುಜ್ಞಾನವಂತರಾದ ದೇವರ ದಾಸಿಮಯ್ಯನವರು ಯಾವುದನ್ನೂ ಪ್ರಶ್ನಿಸದೇ ಸ್ವೀಕರಿಸುವ ಮನೋಭಾವದವರಲ್ಲ ಎಂದರು.
ನೇಕಾರಿಕೆ ಇವರ ಕುಲ ಕಸುಬಾಗಿತ್ತು. ಇವರ ಪತ್ನಿ ಶರಣೆ ದುಗ್ಗಳೇಯವರು ಸಹ ಶಿವಭಕ್ತಿ ಹಾಗೂ ಕುಲಕಸುಬನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ದೇವರ ದಾಸಿಮಯ್ಯನವರು ತಮ್ಮ ಅರ್ಥಪೂರ್ಣವಾದ ವಚನಗಳ ಮೂಲಕ ಸಮಾಜ ಸುಧಾರಣೆ ಮಾಡಿದರು. ಇವರ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸಮಾಜದವರು ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ದೇವರ ದಾಸಿಮಯ್ಯ ಜಯಂತಿ ನಿಮಿತ್ತ ಏರ್ಪಡಿಸಿದ್ದ ವಚನಸ್ಪರ್ಧೆ ಹಾಗೂ ನಿಬಂಧ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಲಕ್ಷ್ಮೀ ಖಾಕಿ, ಪೂರ್ಣಿಮಾ ಭರದ್ವಾಡ್, ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ದಶರಥರಾಜ ಕೊಳ್ಳಿ, ರಮೇಶ ಗಡ್ಡಿ, ಅಶೋಕ ಹೊನ್ನಳ್ಳಿ, ರಮೇಶ ಹತ್ತಿಕಾಳ, ಶ್ರೀನಿವಾಸ ಹುಬ್ಬಳ್ಳಿ, ಮಲ್ಲಿಕಾರ್ಜುನ ಐಲಿ, ಆರ್.ಕೆ. ಹುಬ್ಬಳ್ಳಿ, ಶಕುಂತಲಾ ಅಕ್ಕಿ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು ಇದ್ದರು. ಅನಿಲ ಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೊಡ್ಡಪ್ಪ ಮೂಲಿಮನಿ ನಿರೂಪಿಸಿದರು.