ಕೊಪ್ಪಳ: ತಮ್ಮ ಸಮಾಜದ ಸಮಸ್ಯೆ ಏನೇ ಇದ್ದರೂ ಸಚಿವರು ಸ್ಪಂದಿಸುತ್ತಾರೆ. ಅನಗತ್ಯ ವಿವಾದ ಮಾಡುವುದಕ್ಕಾಗಿ ಸಚಿವ ಶಿವರಾಜ ತಂಗಡಗಿ ಅವರ ಮನೆಯ ಎದುರು ಧರಣಿ ನಡೆಸುವುದು ಸರಿಯಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ರಡ್ಡಿ ಶ್ರೀನಿವಾಸ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮಾಜದ ಶ್ರೀ ಪ್ರಣವಾನಂದ ಸ್ವಾಮೀಜಿಗಳು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಏನಾದರೂ ಸಮಸ್ಯೆ ಇದ್ದರೆ ಬೆಂಗಳೂರಿನಲ್ಲಿ ಹೋರಾಟ ಮಾಡಬೇಕು. ಅದು ಬಿಟ್ಟು, ಅವರ ನಿವಾಸದ ಎದುರು ಧರಣಿ ನಡೆಸುತ್ತೇನೆ ಎಂದು ಹೇಳುವುದು ಸರಿಯಲ್ಲ. ಈಡಿಗ ಸಮಾಜದ ಸ್ವಾಮೀಜಿಗಳು ಈ ಹಿಂದೆ ಬೆಂಗಳೂರಿನಲ್ಲಿ ತಮ್ಮ ಬೇಡಿಕೆಗಳ ಕುರಿತಂತೆ ಹೋರಾಟ ನಡೆಸಿದ ವೇಳೆ ಆಗ ಸರ್ಕಾರದ ಭಾಗವಾಗಿ ಸಚಿವ ಶಿವರಾಜ ತಂಗಡಗಿ ಅವರು ಆಗಮಿಸಿ ಅವರ ಮನವಿ ಸ್ವೀಕರಿಸಿ, ಮುಖ್ಯಮಂತ್ರಿ ಜತೆ ಮಾತನಾಡುವುದಾಗಿ ಭರವಸೆ ನೀಡಿದ್ದೂ ನಿಜ. ಆದರೆ ಸಚಿವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಲಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಸಚಿವ ತಂಗಡಗಿ ಬಗ್ಗೆ ಏಕವಚನದಲ್ಲಿ ಮಾತನಾಡಿ, ಅವರ ಮನೆ ಮುಂದೆ ಧರಣಿ ನಡೆಸುವುದು ಸ್ವಾಮೀಜಿಗಳಿಗೆ ಶೋಭೆ ತರುವುದಿಲ್ಲ. ಈಡಿಗ ಸಮಾಜದ ಬೇಕು-ಬೇಡಿಕೆಗಳ ಬಗ್ಗೆ ಈಗಾಗಲೇ ಸಚಿವರು ಸಹ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಿದ್ದಾರೆ. ಸಚಿವರು ಸ್ವಾಮಿಗಳ ಕರೆ ಸ್ವೀಕರಿಸಿಲ್ಲ ಎಂದು ಸ್ವಾಮಿಗಳು ಆರೋಪ ಮಾಡಿದ್ದಾರೆ. ಆದರೆ ಸಚಿವರಿಗೆ ಸ್ವಾಮಿಗಳು ಕರೆಯನ್ನೇ ಮಾಡಿಲ್ಲ ಎಂದು ಆರೋಪಿಸಿದರು.

ಪ್ರಣವಾನಂದ ಸ್ವಾಮೀಜಿಗಳು ರಾಜಕೀಯ ಸ್ವಾಮಿಗಳೋ? ಅಥವಾ ಸಮಾಜದ ಸ್ವಾಮೀಜಿ ಎನ್ನುವುದು ಗೊಂದಲವಾಗುತ್ತಿದೆ. ಸಚಿವರು ಎಲ್ಲ ಸಮಾಜದವನ್ನು ಒಟ್ಟಾಗಿ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಆದರೆ ಸುಮ್ಮನೆ ಸಚಿವರ ಬಗ್ಗೆ ತೇಜೋವಧೆ ಸರಿಯಲ್ಲ. ಸ್ವಾಮಿಗಳು ಮಧು ಬಂಗಾರಪ್ಪ ಅವರ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ. ಅವರು ಮತ್ತೆ ಸಚಿವರ ವಿರುದ್ಧ ಮಾತನಾಡಿದರೆ ನಾವೂ ಮತ್ತೆ ಸ್ವಾಮಿಗಳ ವಿರುದ್ಧ ಮಾತನಾಡಬೇಕಾಗುತ್ತದೆ ಎಂದರು.