ಹುಬ್ಬಳ್ಳಿ:

ಕಿತ್ತೂರ ಕರ್ನಾಟಕದಲ್ಲಿ ಮೋಡ ಬಿತ್ತನೆಯನ್ನು ಸರ್ಕಾರವೇ ಮಾಡಲಿ, ಕಿತ್ತೂರ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ರಚಿಸಿ ವಿಶೇಷ ಅನುದಾನ ನೀಡಲಿ., ಮಹದಾಯಿ ಯೋಜನೆಗೆ ಕೇಂದ್ರದಿಂದ ಅನುಮತಿ ಪಡೆದು ತಕ್ಷಣವೇ ಕಾಮಗಾರಿ ಆರಂಭಿಸಲಿ!

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ನಡೆಸಿದ ಬೆಳಗಾವಿ ವಿಭಾಗ ಮಟ್ಟದ ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಶಾಸಕ ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ಹಲವು ಶಾಸಕರು ಆಗ್ರಹಿಸಿದ ಪರಿ.

ಶಾಸಕ ಕೋನರಡ್ಡಿ, ಮುಂಗಾರು ಮಳೆಯಿಲ್ಲದೇ ರೈತರು ಕಂಗಾಲಾಗಿದ್ದು ಬಿತ್ತಿದ ಬೆಳೆ ಭೂಮಿಬಿಟ್ಟು ಮೇಲೇಳುತ್ತಿಲ್ಲ. ಮೋಡ ಬಿತ್ತನೆಗೆ ಇದು ಸಕಾಲ. ಆದಕಾರಣ ಸರ್ಕಾರ ಮೋಡ ಬಿತ್ತನೆ ಮಾಡಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಕೆಕೆಆರ್‌ಡಿ ಸ್ಥಾಪಿಸಿದಂತೆ ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ ವಿಶೇಷ ಅನುದಾನ ನೀಡಬೇಕೆಂದು ಆಗ್ರಹಿಸಿರುವ ಅವರು, ಕಳಸಾ-ಬಂಡೂರಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕೆಂದು ಒತ್ತಾಯಿಸಿದರು.


ಮಲಪ್ರಭಾ ಬಲದಂಡೆ ಕಾಲುವೆ ಬಾಕಿ ಕಾಮಗಾರಿಗೆ ಅನುಮತಿ, ಬೆಣ್ಣಿಹಳ್ಳದ ಪ್ರವಾಹ ನಿಯಂತ್ರಣ, ನೀರಿನ ಸದ್ಬಳಕೆಗಾಗಿ ಪರಮಶಿವಯ್ಯ ವರದಿ ಅನ್ವಯ ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ₹ 317 ಕೋಟಿ ವೆಚ್ಚದ ಬೆಣ್ಣಿಹಳ್ಳದ ಉಪಹಳ್ಳ ತುಪರಿಹಳ್ಳದ ಯೋಗೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಬೇಕು. ಈ ಯೋಜನೆ ಜಾರಿಯಾದರೆ 5 ಸಾವಿರ ಹೆಕ್ಟೇರ್‌ ಪ್ರದೇಶ ನೀರಾವರಿಗೊಳಪಡುತ್ತದೆ ಎಂದು ಮನವರಿಕೆ ಮಾಡಿದ್ದಾರೆ.

ಅಣ್ಣಿಗೇರಿ ಪಟ್ಟಣದ ಒಳಚರಂಡಿ ಯೋಜನೆಯ ಡಿಪಿಆರ್‌ ಸಿದ್ಧಪಡಿಸಿ ಸಲ್ಲಿಸಲಾಗಿದೆ. ₹ 124 ಕೋಟಿ ವೆಚ್ಚದ ಯೋಜನೆಯಿದು. ಇದಕ್ಕೂ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು. ಫೋಟೋ: ಕೋನರಡ್ಡಿ