ಸಾರಾಂಶ
ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಮಾನ್ಯತೆಯ ಕೊರತೆ
ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳದಲ್ಲಿ 2021ರಲ್ಲಿ ಸ್ಥಾಪನೆಯಾದ ಬಿಎಸ್ಸಿ ನರ್ಸಿಂಗ್ ಕಾಲೇಜು ಇನ್ನೂ ಕೂಡ ಟೇಕ್ ಆಫ್ ಆಗದೇ ಸಂಕಷ್ಟದಲ್ಲಿದೆ. ಕೆಎನ್‌ಸಿ ಅನುಮೋದಿಸಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದ್ದರೂ, ಮೂಲ ಸೌಕರ್ಯಗಳ ಕೊರತೆಯಿಂದ ಕಾಲೇಜು ಶೋಚನೀಯ ಸ್ಥಿತಿಗೆ ತಲುಪಿದೆ.2022ರ ಏಪ್ರಿಲ್‌ನಲ್ಲಿ ಮೊದಲ ಬ್ಯಾಚ್ ಪ್ರಾರಂಭವಾಗಿದ್ದು, ಆ ವಿದ್ಯಾರ್ಥಿಗಳು 2026ರಲ್ಲಿ ತೇರ್ಗಡೆಯಾಗಲಿದ್ದಾರೆ. ಆದರೆ ಅವರಿಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣ, ಸೌಲಭ್ಯ ಮತ್ತು ಮಾನ್ಯತೆಗಳ ಕೊರತೆ ಆತಂಕ ಹೆಚ್ಚಿಸಿದೆ.
ಹಳೆಯ ಕಟ್ಟಡದಲ್ಲೇ ತರಗತಿಗಳು:ಪ್ರಸ್ತುತ ಕಾರ್ಕಳ ಸರ್ಕಾರಿ ಆಸ್ಪತ್ರೆಯ ಹಳೆಯ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ಪ್ರತಿ ಬ್ಯಾಚ್‌ನಲ್ಲಿ 40 ವಿದ್ಯಾರ್ಥಿಗಳ ದಾಖಲಾತಿ ಇದ್ದು, ನಾಲ್ಕು ಬ್ಯಾಚ್‌ಗಳಲ್ಲಿ ಒಟ್ಟು 160 ಮಂದಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಕಾರ್ಕಳ ಮಾತ್ರವಲ್ಲದೆ ಚಿತ್ರದುರ್ಗ, ಬೀದರ್, ಹಾವೇರಿ ಸೇರಿ ರಾಜ್ಯದ ನಾನಾ ಭಾಗದ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.
ಆದರೆ ತರಗತಿ ಕೊಠಡಿಗಳು, ಲ್ಯಾಬ್, ಗ್ರಂಥಾಲಯ, ಕಾಲೇಜು ಬಸ್, ಕ್ರೀಡಾಂಗಣ, ಅಸಮರ್ಪಕ ಶೌಚಾಲಯ ಇಲ್ಲದ ಕಾರಣ ಕಲಿಕೆಯ ಗುಣಮಟ್ಟ ಹಾಳಾಗಿದೆ. ಸ್ವಚ್ಛತಾ ಕೆಲಸಕ್ಕೂ ವಿದ್ಯಾರ್ಥಿಗಳೇ ಹಣ ಸಂಗ್ರಹಿಸಿ ಹೊರಗಿನಿಂದ ಉಪನ್ಯಾಸಕರನ್ನು ಕರೆಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.ಉಪನ್ಯಾಸಕರ ಕೊರತೆ:
ಒಟ್ಟು 16 ಉಪನ್ಯಾಸಕರ ಅಗತ್ಯವಿದ್ದರೂ, ಪ್ರಸ್ತುತ ಕೇವಲ 5 ಮಂದಿ ಮಾತ್ರ ಇದ್ದು, ಅವರು ಕಾಯಂ ಹುದ್ದೆಯಲ್ಲಿ ಇಲ್ಲ. ಜೊತೆಗೆ ಕ್ಲರಿಕಲ್ ಮತ್ತು ‘ಡಿ’ ದರ್ಜೆ ನೌಕರರಿಲ್ಲದ ಕಾರಣ, ಉಪನ್ಯಾಸಕರೇ ಆಡಳಿತಾತ್ಮಕ ಕೆಲಸವೂ ಮಾಡಬೇಕಾಗಿದೆ. ಇದರಿಂದ ಬೋಧನೆಗೆ ಅಡಚಣೆ ಉಂಟಾಗಿದೆ.ಐಎನ್‌ಸಿ ಮಾನ್ಯತೆಯಿಲ್ಲದೆ ಸಂಕಷ್ಟ:
ಕಾಲೇಜಿಗೆ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ಮಾತ್ರ ಧೃಡೀಕರಣ ಸಿಕ್ಕಿದೆ. ಆದರೆ ಸ್ವಂತ ಕಟ್ಟಡ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಇಂಡಿಯನ್ ನರ್ಸಿಂಗ್ ಕೌನ್ಸಿಲ್ (INC) ಮಾನ್ಯತೆ ಸಿಗಲಿಲ್ಲ. ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಕೇಂದ್ರ ಸಂಸ್ಥೆಗಳು (ಏಮ್ಸ್, ರೈಲ್ವೇಸ್) ಮತ್ತು ವಿದೇಶ ಉದ್ಯೋಗಾವಕಾಶಗಳಲ್ಲಿ ತೊಂದರೆ ಎದುರಾಗಿದೆ.ಸಿಗದ ಅನುದಾನ:ಈ ಕಾಲೇಜು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸಬೇಕಾದರೂ, ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಇಲ್ಲದ ಕಾರಣ ಕಾಲೇಜಿಗೆ ಅನುದಾನವಿಲ್ಲ. ಪ್ರಸ್ತುತ ದೊರೆತಿರುವ ಸೌಲಭ್ಯಗಳ ಬಹುಪಾಲು ಕಾರ್ಕಳ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಎಂಆರ್‌ಪಿಎಲ್ ಹಾಗೂ ಬೋಳಾಸ್ ಸಂಸ್ಥೆಯ ದೇಣಿಗೆಯಿಂದ ಮಾತ್ರ ಸಾಧ್ಯವಾಗಿದೆ.ಕತ್ತಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ:
ಉಡುಪಿ ಹಾಗೂ ದ.ಕ. ಜಿಲ್ಲೆಗಳು ಖಾಸಗಿ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಮುಂಚೂಣಿಯಲ್ಲಿದ್ದರೂ, ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ವಿಷಾದನೀಯ. ಕಾರ್ಕಳ ನರ್ಸಿಂಗ್ ಕಾಲೇಜಿನ ಪರಿಸ್ಥಿತಿ ಸುಧಾರಿಸದಿದ್ದರೆ, ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ವೈದ್ಯಕೀಯ ಸೇವಾ ಹಂಬಲವೇ ಸಂಕಷ್ಟದಲ್ಲಿರಲಿದೆ.------------ಸರ್ಕಾರ ತ್ವರಿತ ಕ್ರಮ ಕೈಗೊಂಡು ಶಾಶ್ವತ ಉಪನ್ಯಾಸಕರ ನೇಮಕ ಹಾಗೂ ಕಟ್ಟಡ ನಿರ್ಮಾಣವನ್ನು ಮಾಡಬೇಕು.
। ವಿ.ಸುನೀಲ್ ಕುಮಾರ್, ಶಾಸಕರು ಕಾರ್ಕಳ------------ನರ್ಸಿಂಗ್ ಕಾಲೇಜು ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗಿದೆ. ಮಾಹಿತಿಯನ್ನು ನೀಡಲಾಗಿದೆ.
। ಸ್ವರೂಪ ಟಿ.ಕೆ., ಉಡುಪಿ ಜಿಲ್ಲಾಧಿಕಾರಿ