ಗದಗ: ದೇಶದ ಭವ್ಯ ಭವಿಷ್ಯವನ್ನು ನಿರ್ಮಿಸುವಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಅನನ್ಯ. ಅಹರ್ನಿಶಿ ದುಡಿಯುವ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಅವರಿಗೆ ಶ್ರೀರಕ್ಷೆಯಾಗಿವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಶುಕ್ರವಾರ ನಗರದ ಡಿಸಿ ಮಿಲ್ ಕಾಂಪೌಂಡ್ ಒಳಗಡೆ ಕೆ.ಎಚ್.ಪಾಟೀಲ ನಗರದಲ್ಲಿ ಶುಕ್ರವಾರ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಣಕ್ಕೆ ಮೊದಲ ಆದ್ಯತೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಕಾರ್ಮಿಕರ ಮಕ್ಕಳು ಶೈಕ್ಷಣಿಕವಾಗಿ ಮುಂಚೂಣಿಗೆ ಬರಬೇಕೆನ್ನುವುದು ಸರ್ಕಾರದ ಆಶಯವಾಗಿದೆ.
ಕಾರ್ಮಿಕರ ಪಾತ್ರ ಶ್ಲಾಘನೀಯ. ಕಣ್ಣಿಗೆ ಕಾಣುವ ರಸ್ತೆ, ಫ್ಲೈ ಒವರ್, ಕಾಲೇಜುಗಳು, ಮ್ಯೂಸಿಯಂ ಹಾಗೂ ಗುಡಿ- ಗುಂಡಾರಗಳನ್ನು ನಿರ್ಮಿಸುವವರು ಕಾರ್ಮಿಕರು. ಸಾವಿರಾರು ವರ್ಷಗಳ ಕಾಲ ಉಳಿಯುವ ಇಂತಹ ಸ್ಮಾರಕಗಳ ಹಿಂದೆ ಕಾರ್ಮಿಕರ ರಕ್ತ ಮತ್ತು ಬೆವರಿದೆ ಎಂದರು.ದೇಶದಲ್ಲಿ ಕಾರ್ಮಿಕ ಕಲ್ಯಾಣ ಕಾನೂನುಗಳನ್ನು ಜಾರಿಗೆ ತರುವಲ್ಲಿ ಆಸ್ಕರ್ ಫರ್ನಾಂಡಿಸ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಅಪಾರ. ಅವರ ಪ್ರಯತ್ನದಿಂದಾಗಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಲಭಿಸುತ್ತಿದೆ ಎಂದರು.
ಕಾರ್ಮಿಕ ಕಾರ್ಡ್‌ನ ಮಹತ್ವ ಎಂತದ್ದು ಎಂದರೆ ಕಟ್ಟಡ ಕಾರ್ಮಿಕ ಕಾರ್ಡ್ ಎಂಬುದು ಕೇವಲ ಚೀಟಿಯಲ್ಲ, ಅದು ಕಾರ್ಮಿಕರಿಗೆ ಒಂದು ಸರ್ಕಾರಿ ನೌಕರಿಯಷ್ಟೇ ಸಮಾನವಾದ ಭದ್ರತೆ ನೀಡುತ್ತದೆ. ಕೊರೋನಾ ಅಂತಹ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ಈ ಕಾರ್ಡ್ ಮೂಲಕ ವಿತರಿಸಲಾದ ಕಿಟ್‌ಗಳು ಮತ್ತು ಸಹಾಯಹಸ್ತ ದೊಡ್ಡ ನೆರವು ನೀಡಿದೆ ಎಂದರು.
ಅರ್ಹ ಫಲಾನುಭವಿಗಳು ಕಾರ್ಮಿಕ ಕಾರ್ಡ್‌ನಿಂದ ವಂಚಿತರಾಗಿದ್ದರೆ, ಅಂತಹವರು ಎಂಎಲ್‌ಎ ಕಚೇರಿ ಅಥವಾ ಕಾರ್ಮಿಕ ಸಂಘಟನೆಗೆ ಅರ್ಜಿ ಸಲ್ಲಿಸಿದರೆ ಒಂದು ವಾರದೊಳಗೆ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಕಾರ್ಮಿಕರ ಮಕ್ಕಳ ವಸತಿ ಶಾಲೆ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.ವಸತಿ ಶಾಲೆಗಾಗಿ ನಗರದ ಸಮೀಪವಿರುವ ಗುಡ್ಡದ ಸಾಲಿನಲ್ಲಿ, ನವೋದಯ ಶಾಲೆ ಹಾಗೂ ಮೈನಾರಿಟಿ ವಸತಿ ಶಾಲೆಗಳ ಪಕ್ಕದಲ್ಲೇ 10 ಎಕರೆ ವಿಶಾಲವಾದ ಭೂಮಿಯನ್ನು ಗುರುತಿಸಲಾಗಿದೆ.
ಇದೇ ವರ್ಷ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಾಲೆಯಲ್ಲಿ ಚಟುವಟಿಕೆಗಳು ಆರಂಭವಾಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾವಿರಾರು ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.
625ಕ್ಕೆ 624 ಅಂಕ ಗಳಿಸಿ ಮರು ಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸಿದ್ದ ವಿದ್ಯಾರ್ಥಿನಿಯ ಧೈರ್ಯವನ್ನು ಶ್ಲಾಘಿಸಿದ ಸಚಿವರು, ಕಾರ್ಮಿಕರ ಮಕ್ಕಳು ಕೂಡ ಇಂತಹ ಉನ್ನತ ಗುರಿಗಳನ್ನು ಹೊಂದಿರಬೇಕು ಎಂದರು.ಕಾರ್ಯಕ್ರಮದಲ್ಲಿ ಅಭಿನವ ಕೊಟ್ಟೂರು ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮಹಬೂಬ್ ಖಾನ್ ಪಠಾಣ್, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಡಾ. ಗಣೇಶ್ ರಾವ್ ಸೇರಿದಂತೆ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
