ಗದಗ: ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೇ ಮೊದಲ ಬಾರಿಗೆ ಸಮಾಧಾನ ಸಮಾರೋಹ- 2026 ಎಂಬ ವಿಶೇಷ ಲೋಕ್ ಅದಾಲತ್‍ನ್ನು ಆ. 21, 22 ಮತ್ತು 23ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಶಿವರಾಮನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಒಟ್ಟು 4328 ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಿದೆ. ಜಿಲ್ಲಾವಾರು ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ನಗರ(1245) ಅಗ್ರಸ್ಥಾನದಲ್ಲಿದ್ದರೆ, ಬೆಳಗಾವಿ 517, ಕಲಬುರಗಿ 269, ವಿಜಯಪುರ 213, ಧಾರವಾಡ 188, ಬಾಗಲಕೋಟೆ 159 ಹಾಗೂ ಗದಗ ಜಿಲ್ಲೆಯ 125 ಪ್ರಕರಣಗಳನ್ನು ಇತ್ಯರ್ಥಕ್ಕೆ ಗುರುತಿಸಲಾಗಿದೆ.ಉಳಿದಂತೆ ಬಳ್ಳಾರಿ 109, ತುಮಕೂರು 101, ಕೊಪ್ಪಳ 98, ಹಾವೇರಿ 81, ಉಡುಪಿ 78, ಬೀದರ್ 77, ದಕ್ಷಿಣ ಕನ್ನಡ 75, ಶಿವಮೊಗ್ಗ 69, ರಾಯಚೂರು 69, ಚಿತ್ರದುರ್ಗ 58, ಮೈಸೂರು 56, ದಾವಣಗೆರೆ 47, ಉತ್ತರ ಕನ್ನಡ 35, ಮಂಡ್ಯ 30, ಚಿಕ್ಕಮಗಳೂರು 27, ಹಾಸನ 24, ಬೆಂಗಳೂರು ಗ್ರಾಮಾಂತರ 18, ರಾಮನಗರ 17, ಚಿಕ್ಕಬಳ್ಳಾಪುರ 17, ಕೊಡಗು 15, ಯಾದಗಿರಿ 14 ಹಾಗೂ ಚಾಮರಾಜನಗರದ 4 ಪ್ರಕರಣಗಳು ಒಳಗೊಂಡಿವೆ.
ಈ ಅದಾಲತ್‌ನಲ್ಲಿ ಬ್ಯಾಂಕಿಂಗ್, ವಿಮೆ, ಮೋಟಾರು ಅಪಘಾತ ಪರಿಹಾರ, ಗ್ರಾಹಕ ವ್ಯಾಜ್ಯಗಳು, ರೇರಾ, ಕ್ರಿಮಿನಲ್, ಕೌಟುಂಬಿಕ ವಿವಾದ, ಕಾರ್ಮಿಕ ಕಾನೂನು, ಭೂಸ್ವಾಧೀನ ಮತ್ತು ಪುನರ್ವಸತಿ ಸೇರಿದಂತೆ ವಿವಿಧ ನಾಗರಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಆಸಕ್ತ ಕಕ್ಷಿದಾರರು ಮೇ 31ರೊಳಗೆ ಸುಪ್ರೀಂ ಕೋರ್ಟ್ ವೆಬ್‍ಸೈಟ್‌ನಲ್ಲಿರುವ ಗೂಗಲ್ ಫಾರ್ಮ್ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು. ನೋಟಿಸ್ ಪಡೆದವರು ಜಿಲ್ಲಾ ಅಥವಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಮುಂದೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬಹುದು.ನ್ಯಾ. ಆರ್. ದೇವದಾಸ್ ಮಾತನಾಡಿ, ಇದು ಜನಸಾಮಾನ್ಯರಿಗೆ ತ್ವರಿತ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ಪಡೆಯಲು ಸಿಕ್ಕಿರುವ ಮಹತ್ವದ ಅವಕಾಶ ಎಂದು ಬಣ್ಣಿಸಿದರು. ಹೆಚ್ಚಿನ ವಿವರಗಳಿಗಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಖ್ಯೆ 080- 22111729 ಅಥವಾ ಟೋಲ್ ಫ್ರೀ ಸಂಖ್ಯೆ 15100 ಅನ್ನು ಸಂಪರ್ಕಿಸಲು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಗದಗದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್. ಶಿವನಗೌಡರ ಹಾಗೂ ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಉಪಸ್ಥಿತರಿದ್ದರು.