ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಉಚಿತ ಕೊಟ್ಟು, ಉಳಿದವನ್ನು ರದ್ದು ಮಾಡಬೇಕು. ಅಂದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಹೇಳಿದರು.
ಕುಷ್ಟಗಿ/ಕೊಪ್ಪಳ: ಆರೋಗ್ಯ ಹಾಗೂ ಶಿಕ್ಷಣ ಬದುಕಲು ಅವಶ್ಯಕ. ಇವುಗಳನ್ನು ಬಿಟ್ಟು ಎಲ್ಲವನ್ನೂ ಸರ್ಕಾರಗಳು ರದ್ದು ಮಾಡಬೇಕು. ಬದುಕುವ ಶಿಕ್ಷಣ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಹೇಳಿದರು.
ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್, ಎಸ್‌ವಿಸಿ ಶಿಕ್ಷಣ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಗಳದ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ (40+) ಸಿದ್ಧತಾ ಕಾರ್ಯಾಗಾರ ಅಂಗವಾಗಿ ವಿದ್ಯಾರ್ಥಿಗಳಿಗೆ ತಜ್ಞರಿಂದ ಜರುಗಿದ ವಿಶೇಷ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಉಚಿತ ಕೊಟ್ಟು, ಉಳಿದವನ್ನು ರದ್ದು ಮಾಡಬೇಕು. ಅಂದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಐದಾರು ಕಿ.ಮೀ. ದೂರದಿಂದ ಶಾಲೆಗಳಿಗೆ ತೆರಳುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರ ವಿತರಿಸುತ್ತಿದ್ದ ಸೈಕಲ್ ಸೌಲಭ್ಯ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಇದು ಮಕ್ಕಳಿಗೆ ತುಂಬಾ ಅನುಕೂಲವಾಗಿತ್ತು. ಸರ್ಕಾರಕ್ಕೆ ಒತ್ತಾಯ ಮಾಡುವುದು ಸಾರ್ವಜನಿಕರ ಜವಾಬ್ದಾರಿ ಕೂಡ ಹೌದು. ಅಧಿವೇಶನದಲ್ಲಿ ನಡೆಯುವ ಚರ್ಚೆಯಲ್ಲಿ ವಿರೋಧ ಪಕ್ಷದವರು ಗೃಹಲಕ್ಷ್ಮೀ ಬಂದಿಲ್ಲ ಎಂದು ವಾದ ಮಾಡುತ್ತಾರೆ. ಆದರೆ, ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯ, ಸಮಸ್ಯೆಗಳು ಮತ್ತು ಶಿಕ್ಷಕರ ಕೊರತೆಯ ಬಗ್ಗೆ ಒಬ್ಬರೂ ಧ್ವನಿ ಎತ್ತುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಪೂರ್ಣ ಪ್ರಮಾಣದ ಶಿಕ್ಷಕರನ್ನು ನೇಮಕಾತಿ ಮಾಡಬೇಕು. ಉತ್ತೀರ್ಣ ಫಲಿತಾಂಶ ಪ್ರತಿಶತ ಶೇ.೩೫ ಇದ್ದುದನ್ನು ಶೇ. ೩೩ಕ್ಕೆ ಇಳಿಸಿರುವುದು ಸರಿಯಾದ ವ್ಯವಸ್ಥೆ ಅಲ್ಲ. ಇದನ್ನು ನಾನು ವಿರೋಧಿಸಿದ್ದೇನೆ ಎಂದರು.
ಕೆಲ ವಿದ್ಯಾರ್ಥಿಗಳಿಗೆ ಓದಿದ ವಿಷಯಗಳು ಗೊಂದಲಮಯವಾಗಿ ಮರೆತು ಹೋಗುವ ಪರಿಸ್ಥಿತಿ ಇರುತ್ತದೆ. ಧೈರ್ಯದಿಂದ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಪ್ರತಿವರ್ಷ ಉಡುಪಿ, ಮಂಗಳೂರು ಜಿಲ್ಲೆಗಳು ಪಡೆಯುವ ಮೊದಲ ಸ್ಥಾನವನ್ನು ನಾವು ಯಾಕೆ ತೆಗೆದುಕೊಳ್ಳಬಾರದು ಎಂಬುದನ್ನು ಅರಿಯಬೇಕು. ಅಂಥ ರೆಕಾರ್ಡ್ ಮುರಿಯುವಂತ ಕೆಲಸ ನಮ್ಮ ತಾಲೂಕು, ಜಿಲ್ಲೆಯಿಂದ ಆಗಬೇಕು. ಎಸ್ಸೆಸ್ಸೆಲ್ಸಿ ಅನ್ನುವುದು ಜೀವನದ ಪ್ರಮುಖ ಘಟ್ಟ. ಲಕ್ಷ್ಯಗೊಟ್ಟು ಓದಬೇಕು. ಪರೀಕ್ಷೆಯಲ್ಲಿ ಪಾಸಾದವರು ಶಿಕ್ಷಣ ಮುಂದುವರಿಸುತ್ತಾರೆ. ಫೇಲಾದವರು ಮೊಟಕುಗೊಳಿಸುವ ಸಂಭವ ಹೆಚ್ಚಿರುತ್ತದೆ. ಫೇಲಾಗಿ ಬೇರೆಯವರು ಹೀಯಾಳಿಸುವಂತೆ ಮಾಡಿಕೊಳ್ಳಬಾರದು. ಶಾಲೆಗೆ ತಪ್ಪದೆ ಹೋಗುವುದರ ಜತೆಗೆ ಶೇ. ೭೫ರಷ್ಟು ಹಾಜರಾತಿ ಪಾಲನೆಯಾಗಬೇಕು. ವಿದ್ಯಾರ್ಥಿಗಳ ಕೆಲಸ ಕೇವಲ ಓದುವುದಾಗಬೇಕು. ಶಿಸ್ತು ಸಂಯಮ ಮುಖ್ಯವಾಗಬೇಕು ಎಂದರು.ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆ ವೇಳೆಯಲ್ಲಿ ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಮತ್ತು ಸಂಬಂಧಿಕರು ತೀರಿಕೊಂಡರೂ ಅದನ್ನು ಲೆಕ್ಕಿಸದೇ ಪರೀಕ್ಷೆ ಬರೆದು ಅತಿ ಹೆಚ್ಚು ಅಂಕ ಗಳಿಸಿ, ಹೆಸರು ಮಾಡಿದ ಉದಾಹರಣೆ ಸಾಕಷ್ಟಿವೆ. ಅಂಥವರ ಮಧ್ಯೆ ಯಾರೂ ಪಾಸಾಗುವಿಕೆಯಿಂದ ಹಿಂದುಳಿಯಬಾರದು. ಬಹುತೇಕ ಪರೀಕ್ಷೆಗಳ ಫಲಿತಾಂಶಗಳಲ್ಲಿ ಹೆಣ್ಣುಮಕ್ಕಳು ಮುಂದೆ ಇರುತ್ತಾರೆ. ಹೆಣ್ಮಕ್ಕಳೇ ಸ್ಟ್ರಾಂಗ್ ಎಂಬುದನ್ನು ಪ್ರುವ್ ಮಾಡುತ್ತಾರೆ. ಗಂಡು ಮಕ್ಕಳು ಕೂಡ ಹೆಚ್ಚು ಶ್ರಮವಹಿಸಿ ಉತ್ತಮ ಫಲಿತಾಂಶ ಪಡೆಯಬೇಕು. ಇದು ಚಿಂತನೆ ಮಾಡಬೇಕಾದ ವಿಷಯವಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪೈಪೋಟಿ ಕೊಡುವ ರೀತಿಯಲ್ಲಿ ಫಲಿತಾಂಶ ಪಡೆಯಬೇಕು. ಶಿಸ್ತು ಅಳವಡಿಸಿಕೊಂಡರೆ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಸಮಯಕ್ಕೆ ಹೆಚ್ಚು ಮಹತ್ವ ಕೊಡಬೇಕು. ತಂದೆ ತಾಯಿಗಿಂತ ಹೆಚ್ಚು ಪ್ರೀತಿಸುವವರು ಗುರುಗಳು. ಗುರುಗಳಿಗೆ ಬೆಲೆ ಕೊಡಬೇಕು ಎಂದರು.
ಎಷ್ಟೋ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ಎಂಬುದನ್ನು ಕನ್ನಡಪ್ರಭ ಹಿಂದೆ ವರದಿ ಪ್ರಕಟಿಸಿದ್ದನ್ನು ಅಮರೇಗೌಡ ಬಯ್ಯಾಪೂರ ಅವರು ಸ್ಮರಿಸಿದರು.ವಿಜಯ ಚಂದ್ರಶೇಖರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಿ.ವಿ. ಚಂದ್ರಶೇಖರ, ಹುಬ್ಬಳ್ಳಿಯ ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ, ಜಿಲ್ಲಾ ವಿಶೇಷ ವರದಿಗಾರ ಸೋಮರಡ್ಡಿ ಅಳವಂಡಿ, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ದೊಡ್ಡೇಶ ಯಲಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ವಿಜಯ ಚಂದ್ರಶೇಖರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಇಒ ಜಗದೀಶ, ಕ್ಷೇತ್ರ ಸಮನ್ವಯಾಧಿಕಾರಿ ಎಂ. ಜಗದೀಶಪ್ಪ, ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಬಿ. ಚಂದ್ರಶೇಖರ ಆಚಾರ್, ನೌಕರರ ಸಂಘದ ತಾಲೂಕಾಧ್ಯಕ್ಷ ನೀಲನಗೌಡ ಹೊಸಗೌಡ್ರ, ಶಿಕ್ಷಕರ ಸಂಘದ ಕಾರ್ಯದರ್ಶಿ ಶಾಖೀರ್ ಬಾಬಾ, ಉಪನ್ಯಾಸಕರಾದ ಆರ್.ಬಿ. ಬ್ಯಾಳಿ, ವೆಂಕಟೇಶ ಗೌಡರ, ಮಹಾಂತೇಶ, ವಿಠ್ಠಲ, ನಾಗರಾಜ ನಿಡಗುಂದಿ, ವಿಜಯಕುಮಾರ ಮೈತ್ರಿ, ವೈ.ಬಿ.ಚೂರಿ, ಸಂಗನಗೌಡ ನಾಗನಗೌಡ್ರ, ಜಗದೀಶ ಸೂಡಿ, ಶ್ರೀಕಾಂತ ಬೆಟಗೇರಿ ಇತರರಿದ್ದರು. ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರೂಪಿಸಿದರು.