ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ವಿರೋಧ ಪಕ್ಷದವರು ಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದಾರೆ. ನಾವೆಲ್ಲ ಒಂದಾಗಿದ್ದೇವೆ, ಬಲಿಷ್ಠವಾಗಿದ್ದೇವೆ. ಮುಂದಿನ ಎರಡೂವರೆ ವರ್ಷ ಅಧಿಕಾರ ನಡೆಸುತ್ತೇವೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ ಸ್ಪಷ್ಟಪಡಿಸಿದರು.

ಹಾನಗಲ್ಲ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ವಿರೋಧ ಪಕ್ಷದವರು ಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದಾರೆ. ನಾವೆಲ್ಲ ಒಂದಾಗಿದ್ದೇವೆ, ಬಲಿಷ್ಠವಾಗಿದ್ದೇವೆ. ಮುಂದಿನ ಎರಡೂವರೆ ವರ್ಷ ಅಧಿಕಾರ ನಡೆಸುತ್ತೇವೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ ಸ್ಪಷ್ಟಪಡಿಸಿದರು.ಹಾನಗಲ್ಲಿನಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಜವಾಬ್ದಾರಿಯುತ ವಿರೋಧ ಪಕ್ಷ ಮಾಡುವ ಕೆಲಸವನ್ನು ಮರೆತು. ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೋರಿಸುತ್ತಾರೆ. ಅವರು ಕಾಂಗ್ರೆಸ್‌ನವರು ಏನು ಮಾಡುತ್ತಿದ್ದಾರೆ ಎಂಬುದರಲ್ಲೇ ಕಾಲ ಹರಣ ಮಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಪಕ್ಷದ ತೀರ್ಮಾನ ಹೈಕಮಾಂಡ ತೀರ್ಮಾನವೇ ಅಂತಿಮ. ಈ ಕುರಿತು ಯಾವ ಪ್ರತಿಕ್ರಿಯೆ ನೀಡುವುದಿಲ್ಲ. ಎರಡೂವರೆ ವರ್ಷ ಸರಕಾರ ಮಾಡಿದ್ದೇವೆ ಮುಂದೆ ಎರಡೂವರೆ ವರ್ಷ ಅಧಿಕಾರ ಮುಂದುವರೆಸುತ್ತೇವೆ. ಸರಕಾರದ ಸಾಧನೆಗಳನ್ನು ಜನರ ಎದುರು ತೆರೆದಿಡುತ್ತೇವೆ. ಎಲ್ಲ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿದ್ದೇವೆ. ನಮ್ಮ ಸರಕಾರದ ಸಂಕಲ್ಪ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು. ಈ ರಾಜ್ಯವನ್ನು ಸರ್ವಜನಾಂಗದ ಶಾತಿಯ ತೋಟವನ್ನಾಗಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಪಕ್ಷ ಹಾಗೂ ಸರಕಾರ ಬಲಿಷ್ಠವಾಗಿದೆ ಎಂದರು. ನರೇಗಾ ವಿಚಾರದಲ್ಲಿ ಬಿಜೆಪಿ ಮಹಾತ್ಮಾ ಗಾಂಧಿ ಹೆಸರು ತೆಗೆದಿದ್ದಾರೆ. ಅವರಿಗೆ ಗಾಂಧಿ ವಿಚಾರದಲ್ಲಿ ನಂಬಿಕೆ ಇಲ್ಲ. ಅದರ ವಿರುದ್ಧ ಜನವರಿ 5ರಿಂದ ದೇಶಾದ್ಯಂತೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಬಿಜೆಪಿಯ ವಿಚಾರಗಳನ್ನು ಮನೋಸ್ಥಿತಿಯನ್ನು ಜನರ ಮುಂದಿಡುತ್ತೇವೆ. ಮಹಾತ್ಮಾ ಗಾಂಧಿ ಅವರ ಸಿದ್ಧಾಂತಗಳ ಮೇಲೆ ನಂಬಿಕೆ ಇಲ್ಲದ ಬಿಜೆಪಿ ವಿರುದ್ಧ ಆಂದೋಲನವನ್ನು ಮಾಡುತ್ತೇವೆ ಎಂದರು. ಸಚಿವ ಸಂಪುಟದಲ್ಲಿ ಸಲೀಂಅಹ್ಮದ ಅವರಿಗೆ ಮಂತ್ರಿ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2023 ರಲ್ಲಿ ನಾನು ಮಂತ್ರಿಯಾಗಬೇಕಿತ್ತು. ಈ ಭಾಗದ ಉಸ್ತುವಾರಿ ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ 52 ಕ್ಷೇತ್ರಗಳಲ್ಲಿ 46ರಲ್ಲಿ ಗೆದ್ದಿದ್ದೇವೆ. ಜ. 15ರ ನಂತರ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಯುತ್ತದೆ. ಆ ಸಂದರ್ಭದಲ್ಲಿ ನನಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದ ಅವರು, ಸಿಎಂ ಬದಲಾವಣೆ ಕುರಿತು ಪತ್ರಕರ್ತರ ಪ್ರಶ್ನೆಗೆ ಕಿವಿ ಕೇಳುತ್ತಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಕೆಪಿಸಿಸಿ ಸದಸ್ಯ ಮುನ್ನಾ ಜಮಾದಾರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜು ಗುರಣ್ಣನವರ, ಮುಖಂಡರಾದ ಮತಿನ ಶಿರಬಡಗಿ, ಎಂ.ಎಂ. ಮುಲ್ಲಾ, ರಾಜಕುಮಾರ ಸಿರಪಂತಿ, ದುದ್ದು ಅಕ್ಕಿವಳ್ಳಿ, ಸಿಕಂದರ ವಾಲೀಕಾರ, ಮಹ್ಮದಜಾಫರ ಬಾಳೂರ, ಖುರ್ಷದ ಹುಲ್ಲತ್ತಿ, ಯಾಸೀರ ಅರಾಫತ ಮಕಾನದಾರ, ಮುಕ್ತಾರಹ್ಮದ ಕೇಣಿ, ಬಾಬಾಜಾನ ಕೊಡವಾಡಿ, ಇರ್ಫಾನ ಮಿಠಾಯಗಾರ, ಹರಬಾಜ ಇನಾಂದಾರ, ಖಲೀಂ ಮಲ್ಲಿಗ್ಗಾರ, ಇರ್ಫಾನ ಇನಾಂದಾರ, ಸಾದಿಕ ನಾಯಕ ಮೊದಲಾದವರು ಈ ಸಂದರ್ಭದಲ್ಲಿದ್ದರು.