ಅಕ್ರಮ ಗಣಿ ಕಡಿವಾಣಕ್ಕೆ ಹೊಸ ಕಾನೂನಿಗೆ ರಾಜ್ಯಪಾರ ಅಂಕಿತ

| Published : Sep 11 2025, 12:03 AM IST

ಅಕ್ರಮ ಗಣಿ ಕಡಿವಾಣಕ್ಕೆ ಹೊಸ ಕಾನೂನಿಗೆ ರಾಜ್ಯಪಾರ ಅಂಕಿತ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಮತ್ತು ಅಪರಾಧದ ಮೂಲಕ ಗಳಿಸಿದ ಸಂಪತ್ತನ್ನು ವಶಪಡಿಸಿಕೊಳ್ಳಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿದ್ದು, ಮಂಗಳವಾರ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗದಗ

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಮತ್ತು ಅಪರಾಧದ ಮೂಲಕ ಗಳಿಸಿದ ಸಂಪತ್ತನ್ನು ವಶಪಡಿಸಿಕೊಳ್ಳಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿದ್ದು, ಮಂಗಳವಾರ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಅಕ್ರಮ ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕ ಅಧಿನಿಯಮ-2025 ಈಗ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಯಲ್ಲಿದೆ. ಈ ಹೊಸ ಕಾನೂನು ಕನ್ನಡಿಗರ ಆಸ್ತಿಯನ್ನು ಕನ್ನಡಿಗರಿಗೆ ಮರಳಿ ತರುವ ಕೆಲಸ ಮಾಡಲಿದೆ ಎಂದು ಹೇಳಿದರು.

​ಹೊಸ ಕಾನೂನು ಜಾರಿಯ ಹಾದಿ:

​ಈ ಮಹತ್ವದ ಕಾನೂನು ರಚನೆಯ ಹಿಂದಿನ ಪ್ರಕ್ರಿಯೆಯನ್ನು ವಿವರಿಸಿದ ಸಚಿವರು, ​ಜು.2ರಂದು ನಂದಿಬೆಟ್ಟದಲ್ಲಿ ನಡೆದ ಸಭೆಯಲ್ಲಿ ಗಣಿ ಹಗರಣದ ಬಗ್ಗೆ ಚರ್ಚೆ ನಡೆಸಿದ ನಂತರ, ಉಪ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ಮಾಡಲಾಯಿತು. ​ಜು.5ರಂದು ಈ ಕುರಿತು ಕ್ಯಾಬಿನೆಟ್ ಉಪಸಮಿತಿಯನ್ನು ನೇಮಕ ಮಾಡಲಾಯಿತು. ​ಒಂದು ತಿಂಗಳ ನಂತರ ಉಪಸಮಿತಿ ತನ್ನ ಕೆಲಸ ಪೂರ್ಣಗೊಳಿಸಿ ವರದಿ ಸಲ್ಲಿಸಿತು. ಈ ವರದಿಯ ಆಧಾರದಲ್ಲಿ ವಸೂಲಾತಿ ಆಯುಕ್ತರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ​ಆ.18ರಂದು ಕ್ಯಾಬಿನೆಟ್ ಒಪ್ಪಿದ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ವಿಧಾ‌ನ ಪರಿಷತ್‌ನಲ್ಲಿಯೂ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಸೆ.9ರಂದು ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕಿದ್ದಾರೆ ಎಂದರು.

​ಈ ಹೊಸ ಕಾನೂನು ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅನುಕೂಲ ಕಲ್ಪಿಸಲಿದೆ. ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಅವುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಇದು ಈ ನೂತನ ಕಾನೂನಿನ ಉದ್ದೇಶವಾಗಿದೆ ಎಂದು ಪಾಟೀಲ್‌ ಹೇಳಿದರು.

ಸಚಿವ ಸಂಪುಟ ಉಪಸಮಿತಿ ರೂಪಿಸಿದ ಯೋಜನೆ ಪ್ರಕಾರವೇ ಈ ಕಾನೂನನ್ನು ಜಾರಿ ಮಾಡಲಾಗಿದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ರಾಜ್ಯದ ಸಂಪತ್ತನ್ನು ಮರಳಿ ತರುವ ವಿಶ್ವಾಸವಿದೆ ಎಂದು ಅವರು ಹೇಳಿದರು.---

ಕೋಟ್...

ಅಕ್ರಮ ಗಣಿಗಾರಿಕೆ ವಿಷಯವಾಗಿ ಈ ಹಿಂದೆಯೇ ಲೋಕಾಯುಕ್ತ ನ್ಯಾಯಮೂರ್ತಿಗಳು ಸಲ್ಲಿಸಿದ ವರದಿಯಲ್ಲಿ ₹78 ಸಾವಿರ ಕೋಟಿ ಎಂದು ಉಲ್ಲೇಖಿಸಿದ್ದರು. ಇದು ಅಂದಿನ ದರದಲ್ಲಿ ಈಗ ಇನ್ನೂ ಹೆಚ್ಚಾಗಲಿದೆ.

-ಎಚ್.ಕೆ.ಪಾಟೀಲ, ಕಾನೂನು ಸಚಿವ.