ಗ್ಯಾರಂಟಿಗಳಿಗಾಗಿ ಫಲಾನುಭವಿ ಮನೆ ದೋಚುವ ಸರ್ಕಾರ

| Published : Jun 11 2024, 01:35 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳಿಗಾಗಿ ಪಹಣಿ, ಮ್ಯುಟೇಷನ್‌, ಸ್ಟ್ಯಾಂಪ್‌ ಡ್ಯೂಟಿ, ಹದ್ದುಬಸ್ತು ಶುಲ್ಕ, ಮೋಟಾರು ವಾಹನಗಳ ಮೇಲಿನ ತೆರಿಗೆ ಇತ್ಯಾದಿ ಹೆಚ್ಚಿಸಲಾಗಿದೆ. ಆ ಮೂಲಕ ಫಲಾನುಭವಿಗಳ ಮನೆಯಿಂದಲೇ ಹೆಚ್ಚುವರಿ ಹಣವನ್ನು ದೋಚುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

- ಹೆಚ್ಚುವರಿ ಹಣಕ್ಕೆ ಕೈ ಹಾಕಿರುವ ಕಾಂಗ್ರೆಸ್: ಎಚ್.ಆರ್.ಬಸವರಾಜಪ್ಪ ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಗ್ಯಾರಂಟಿ ಯೋಜನೆಗಳಿಗಾಗಿ ಪಹಣಿ, ಮ್ಯುಟೇಷನ್‌, ಸ್ಟ್ಯಾಂಪ್‌ ಡ್ಯೂಟಿ, ಹದ್ದುಬಸ್ತು ಶುಲ್ಕ, ಮೋಟಾರು ವಾಹನಗಳ ಮೇಲಿನ ತೆರಿಗೆ ಇತ್ಯಾದಿ ಹೆಚ್ಚಿಸಲಾಗಿದೆ. ಆ ಮೂಲಕ ಫಲಾನುಭವಿಗಳ ಮನೆಯಿಂದಲೇ ಹೆಚ್ಚುವರಿ ಹಣವನ್ನು ದೋಚುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆರೋಪಿಸಿದರು.

ನಗರದ ಎಪಿಎಂಸಿ ರೈತ ಸಭಾಂಗಣದಲ್ಲಿ ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ತನ್ನ ಗ್ಯಾರಂಟಿ ಯೋಜನೆಗೆ ತಗುಲುವ ₹50 ಸಾವಿರ ಕೋಟಿ ರು.ಗಳನ್ನು ಖಜಾನೆಗೆ ತುಂಬಲು ಹೆಚ್ಚುವರಿ ದರ ವಿಧಿಸುತ್ತಿದೆ. ಬಲಗೈನಲ್ಲಿ ಕೊಟ್ಟಿದ್ದನ್ನು ಎಡಗೈನಲ್ಲಿ ಕಸಿದುಕೊಳ್ಳುತ್ತಿದೆ. ಹೀಗೆ ಕಸಿದುಕೊಳ್ಳುವ ಕಾಂಗ್ರೆಸ್ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರವನ್ನೇ ನೀಡಿದ್ದಾರೆ. ರೈತರಿಗೆ ವಿಧಿಸಿರುವ ಹೆಚ್ಚುವರಿ ಹಣಭಾರದ ವಿರುದ್ಧ ಶೀಘ್ರವೇ ರೈತ ಸಂಘ ಚಳವಳಿ ರೂಪಿಸಲಿದೆ ಎಂದರು.

ತೀವ್ರ ಬರ ಹಿನ್ನೆಲೆಯಲ್ಲಿ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಜಮೀನು ಬೀಳು ಬಿಟ್ಟವರು, ಬೆಳೆ ಬೆಳೆದ ರೈತರಿಗೂ ಕನಿಷ್ಠ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಮಾರ್ಗಸೂಚಿ ದರದಾಚೆಗೂ ಹೆಚ್ಚಿನ ನೆರವನ್ನು ಒದಗಿಸಲಿ. ಈ ಹಿನ್ನೆಲೆ ರೈತರ ಜಮೀನುಗಳ ಖಾತೆಗಳ ಜೋಡಣೆಗೆ ರೈತ ಸಂಘದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ತಿಳಿಸಿದರು.

ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕು:

ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಸಾಲ ಇತರೇ ಕಾರಣಕ್ಕೆ ಬ್ಯಾಂಕ್‌ಗಳು ಜಮಾ ಮಾಡುವಂತಿಲ್ಲ ಎಂಬ ಸರ್ಕಾರದ ಆದೇಶ‍ವೇ ಇದೆ. ಹಾಗಿದ್ದರೂ ಕೆಲ ಬ್ಯಾಂಕ್ ಅಧಿಕಾರಿಗಳು ಮೊಂಡಾಟ ಮಾಡುತ್ತಿದ್ದಾರೆ. ಕೆಲ ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಯಾ ಜಿಲ್ಲಾ ಸಂಘಗಳು ಹೋರಾಟ, ಚಳವಳಿ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಿಸುವ ಜೊತೆಗೆ ಮೃತ ರೈತರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು, ನ್ಯಾಯ ಕೊಡಿಸಬೇಕು ಎಂದು ಬಸವರಾಜಪ್ಪ ಹೇಳಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧಿಸುವಂತಾಗಬೇಕು. ಈ ಸಂಬಂಧ ಪ್ರತ್ಯೇಕ ಸಭೆ ನಡೆಸಬೇಕು. ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ ಏರಿಕೆಗೆ ಕಡಿವಾಣ ಹಾಕುವತ್ತಲೂ ಪಾಲಕರ ಧ್ವನಿಯಾಗಿ ನಿಲ್ಲುವ ಕೆಲಸ ರೈತ ಸಂಘ ಮತ್ತು ಹಸಿರು ಸೇನೆಯಿಂದ ಆಗಬೇಕಾಗಿದೆ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶಿವಪ್ಪ ಕೋಲಾರ, ಅಮೀನ್ ಪಾಷಾ, ರಾಜ್ಯ ಉಪಾಧ್ಯಕ್ಷರಾದ ಹೊನ್ನೂರು ಮುನಿಯಪ್ಪ, ಹಿಟ್ಟೂರು ರಾಜು, ಮಲ್ಲಿಕಾರ್ಜುನ, ಕೊಟ್ಟೂರು ಭರಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಹೊನ್ನೂರು ರಾಜು, ಗೋಶಾಲೆ ಬಸವರಾಜು, ಪಾಲಾಕ್ಷಿ ಇತರರಿದ್ದರು.

- - -

ಬಾಕ್ಸ್

* ಬೀಜ, ರಸಗೊಬ್ಬರ ಎಂಆರ್‌ಪಿ ಫಲಕ ಕಡ್ಡಾಯ ಪ್ರದರ್ಶಿಸಲಿ - ರೈತರು ಖರೀದಿಸುವ ವಸ್ತುಗಳಿಗೆ ಜಿಎಸ್‌ಟಿ ಬೇಡ ಎಂದ ಬಸವರಾಜಪ್ಪ

ದಾವಣಗೆರೆ: ರಾಜ್ಯಾದ್ಯಂತ ಕೃಷಿ ಅಧಿಕಾರಿಗಳನ್ನು ಬಿತ್ತನೆ ಬೀಜ, ರಸಗೊಬ್ಬರದ ಅಂಗಡಿಗಳಿಗೆ ಕರೆದೊಯ್ದು, ಪ್ರತಿ ಅಂಗಡಿಯಲ್ಲೂ ಎಂಆರ್‌ಪಿ ಪಟ್ಟಿಯ ಫಲಕ ಹಾಕಿಸುವಂತೆ ಒತ್ತಡ ಹೇರಬೇಕು. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ದೂರು ನೀಡಬೇಕು ಎಂದು ಎಂದು ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ನಗರದ ಎಪಿಎಂಸಿ ರೈತ ಸಭಾಂಗಣದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೀಜದಂಗಡಿ, ರಸಗೊಬ್ಬರದ ಅಂಗಡಿಗಳಲ್ಲಿ ರೈತರು ಖರೀದಿಸಿದ ಸಾಮಗ್ರಿಗಳಿಗೆ ಪ್ರತಿಯಾಗಿ ರಸೀತಿ ಪಡೆಯಬೇಕು ಎಂದರು.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ಗಳಲ್ಲಿ ರೈತರ ಹೋರಾಟದ ತೀವ್ರತೆಯಿಂದಾಗಿ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬಿದ್ದಿತು. ಅಂತಹ ಹೋರಾಟ ಕರ್ನಾಟಕದಲ್ಲಿ ಆಗುತ್ತಿಲ್ಲ. ಬಲವಾದ ಹೋರಾಟಗಳೂ ಇಲ್ಲೂ ಆಗಬೇಕು. ಅನ್ನದಾತ ರೈತರು ಖರೀದಿಸುವ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಬಾರದು. ಜಿಎಸ್‌ಟಿಯಿಂದ ರೈತರಿಗೆ ವಿನಾಯಿತಿ ನೀಡುವಂತೆ ಸರ್ಕಾರವನ್ನು ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಲಿದೆ ಎಂದು ಅವರು ತಿಳಿಸಿದರು.

ಸ್ವಯಂ ವೆಚ್ಚ ಯೋಜನೆ ಕೈಬಿಡಿ:

ವಿದ್ಯುತ್ ಪರಿವರ್ತಕ ಅಳವಡಿಕೆ ಹಿನ್ನೆಲೆ ಸರ್ಕಾರ ವಿಧಿಸುವ ವಿದ್ಯುಚ್ಛಕ್ತಿ ಸ್ವಯಂ ವೆಚ್ಚ ಯೋಜನೆ ಕೈಬಿಡಬೇಕು. ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಸುವ ನಿಟ್ಟಿನಲ್ಲಿ ಬೋರ್‌ವೆಲ್ ಲಾರಿಗಳ ಮಾಲೀಕರು ರೈತರು, ಜನ ಸಾಮಾನ್ಯರನ್ನು ದರೋಡೆ ಮಾಡುತ್ತಿವೆ. ಇರುವಂತಹ ಕೊಳವೆಬಾವಿಗಳಿಗೆ ಜಲ ಮರುಪೂರಣಕ್ಕೆ ರೈತರು ಒತ್ತು ನೀಡಬೇಕು. ಸಾವಯವ ಕೃಷಿ ಹಾಗೂ ಮಳೆ ನೀರು ಕೊಯ್ಲು ಕುರಿತಂತೆ ಶೀಘ್ರವೇ ಸಂಘದಿಂದ ಅಧ್ಯಯನ ಶಿಬಿರ ಆಯೋಜಿಸಲಾಗುವುದು ಎಂದರು.

- - - -10ಕೆಡಿವಿಜಿ7, 8:

ದಾವಣಗೆರೆಯಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಮಿತಿ ಸಭೆಯ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.