ಸಾರಾಂಶ
ಫೈನಲ್ ಪಂದ್ಯದಲ್ಲಿ ಉಳುವಾರನ ತಂಡದ ವಿರುದ್ಧ ಗೆಲವು
ಕನ್ನಡಪ್ರಭ ವಾರ್ತೆ ಮಡಿಕೇರಿಮರಗೋಡುವಿನ ಗೌಡ ಇವ್ನಿಂಗ್ ಸ್ಟಾರ್ಸ್ ಸಮಿತಿ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಅರೆಭಾಷೆ ಜನಾಂಗ ಬಾಂಧವರಿಗಾಗಿ ನಡೆದ ಗೌಡ ಕ್ರಿಕೆಟ್ ಹಬ್ಬದಲ್ಲಿ ಪರ್ಲಕೋಟಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಮರಗೋಡುವಿನ ಭಾರತೀಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಉಳುವಾರನ ತಂಡ ನಿಗದಿತ ೧೦ ಓವರ್‌ನಲ್ಲಿ ೭ ವಿಕೆಟ್ ಕಳೆದುಕೊಂಡು ೬೮ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಪರ್ಲಕೋಟಿ ತಂಡ ೬.೨ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ದಡ ಸೇರಿತು.ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತ ಪರ್ಲಕೋಟಿ ತಂಡ ನಿಗದಿತ ೧೦ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೯೫ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಕಟ್ಟೆಮನೆ ತಂಡ ನಿಗದಿತ ಓವರ್‌ನಲ್ಲಿ ೯ ವಿಕೆಟ್ ಕಳೆದುಕೊಂಡು ೬೪ರನ್ ದಾಖಲಿಸಿ ೩೧ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು.ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತ ಉಳುವಾರನ ತಂಡ ನಿಗದಿತ ಓವರ್‌ನಲ್ಲಿ ೯ ವಿಕೆಟ್ ಕಳೆದುಕೊಂಡು ೮೯ ರನ್ ಕಲೆ ಹಾಕಿತು. ತಂಡದ ಪರ ಪ್ರವೀಣ್ ೧೧ ಎಸೆತದಲ್ಲಿ ೫ ಸಿಕ್ಸರ್ ನೆರವಿನೊಂದಿಗೆ ೩೧ ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ತಳೂರು ತಂಡ ೬ ವಿಕೆಟ್ ಕಳೆದುಕೊಂಡು ೭೪ ರನ್ ದಾಖಲಿಸಿ ೧೫ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ವೈಯಕ್ತಿಕ ಪ್ರಶಸ್ತಿ ವಿವರ:ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪರ್ಲಕೋಟಿ ತಂಡದ ದರ್ಶನ್ ಪಡೆದರು. ಅತ್ಯಮೂಲ್ಯ ಆಟಗಾರ ತಳೂರು ವಿಕ್ಕಿ, ಉತ್ತಮ ಎಸೆತಗಾರ ಉಳುವಾರನ ತಂಡದ ಜೀವು, ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಪರ್ಲಕೋಟಿ ತಂಡದ ಲಕ್ಷಿತ್, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಸಣ್ಣಜನ ತಂಡದ ಗೋಕುಲ್, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಬಿಳಿಯಂಡ್ರ ತಂಡದ ಸತ್ಯಾನಂದ್, ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಪುನರ್ವ ಲಕ್ಷ್ಮೀಪತಿ ಪಡೆದುಕೊಂಡರು.ಪರ್ಲಕೋಟಿಗೆ ೫೦,೦೦೦ ನಗದು:
ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಪರ್ಲಕೋಟಿ ತಂಡಕ್ಕೆ ೫೦,೦೦೦ ರು. ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ರನ್ನರ್ ಅಪ್ ಪ್ರಶಸ್ತಿ ಪಡೆದ ಉಳುವಾರನ ತಂಡಕ್ಕೆ ೩೦,೦೦೦ ರು. ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಸೆಮಿಫೈನಲ್ಸ್‌ನಲ್ಲಿ ಸೋತ ಕಟ್ಟೆಮನೆ ಮತ್ತು ತಳೂರು ತಂಡಕ್ಕೆ ತಲಾ ೧೦,೦೦೦ ಹಾಗೂ ಕ್ವಾರ್ಟರ್ ಫೈನಲ್ಸ್‌ನಲ್ಲಿ ಸೋತ ಕುದುಪಜೆ, ಕೆದಂಬಾಡಿ, ಬಿಳಿಯಂಡ್ರ, ಕಡ್ಲೇರ ತಂಡಗಳಿಗೆ ತಲಾ ೫,೦೦೦ ನೀಡಿ ಗೌರವಿಸಲಾಯಿತು.ಸಮಾರೋಪ ಸಮಾರಂಭ:ಗೌಡ ಕ್ರಿಕೆಟ್ ಹಬ್ಬದ ಸಮಾರೋಪ ಸಮಾರಂಭ ಗೌಡ ಇವ್ನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಮಂತರ್‌ಗೌಡ, ಮಾಜಿ ವಿಧಾನಸಭೆ ಸಭಾಪತಿ ಮತ್ತು ಮಾಜಿ ಶಾಸಕ ಕೊಂಬಾರನ ಬೋಪಯ್ಯ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರಂದ್ಲಾಜೆ ಆನಂದ್, ಗೌಡ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ತುಂತಜೆ ಗಣೇಶ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಪ್ರಮುಖರಾದ ಎಡಕೇರಿ ಪ್ರಸನ್ನ, ಬಡುವಂಡ್ರ ಕವಿತಾ ಬೆಳ್ಯಪ್ಪ, ಕಟ್ಟೆಮನೆ ಪ್ರೇಮಾ ಗಣೇಶ್ ಇತರರಿದ್ದರು.