ಸಾರಾಂಶ
ಚಾಮರಾಜನಗರದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಿದಂಬರ್ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಲೇರಿಯಾ ಮುಕ್ತ ವಾತಾವರಣ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದರೆ ರೋಗರುಜಿನಗಳು ತಾವಾಗಿಯೇ ದೂರವಾಗುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಿದಂಬರ ಹೇಳಿದರು. ನಗರದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ವರ್ಷಗಳ ಹಿಂದೆ ಮಲೇರಿಯಾ ಎಂದರೆ ತುಂಬಾ ಭಯದ ವಾತಾವರಣವಿತ್ತು. ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಜ್ವರಕ್ಕೆ ಚುಚ್ಚುಮದ್ದು ಹಾಗೂ ಚಿಕಿತ್ಸೆ ಲಭ್ಯವಿದೆ. ಮಲೇರಿಯಾ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಆದ್ದರಿಂದ ಮಲೇರಿಯಾ ಸೋಂಕು ಕಡಿಮೆಯಾಗುತ್ತ ಬಂದಿದೆ ಎಂದು ಹೇಳಿದರು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆಗೊಂಡ ಜಾಥಾ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತದವರಗೆ ಸಾಗಿ ಮುಕ್ತಾಯಗೊಂಡಿತು. ಜಾಥಾದಲ್ಲಿ ನಗರದ ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿ ಮಲೇರಿಯಾ ಮುಕ್ತ ಜಿಲ್ಲೆಗಾಗಿ ಬಿತ್ತಿ ಪತ್ರಗಳನ್ನು ಹಿಡಿದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ.ರಾಜೇಶ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ, ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಾಸ್ಕರ, ಹಿರಿಯ ಪ್ರಯೋಗ ಶಾಲೆ ತಾಂತ್ರಿಕಾಧಿಕಾರಿ ದ್ವಾರಕೇಶ್ ಕೆವಿ, ಅರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಇತರರು ಭಾಗವಹಿಸಿದ್ದರು.