ಸಾರಾಂಶ
- ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಕು. ಸಾನಿಕಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಕೊಪ್ಪಲೋಕನಾಥಪುರ ಪ್ರೌಢಶಾಲೆಯಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಳೆದ ಸಾಲಿನಲ್ಲಿ ಶಾಲೆಗೆ ಶೇ. ೧೦೦ ಫಲಿತಾಂಶ ತಂದು ಕೊಡಲು ಕಾರಣಕರ್ತರಾದ ೧೫ ಮಕ್ಕಳಿಗೆ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಓದಿ ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಕು. ಸಾನಿಕ ಹಾಗೂ ಮೊದಲ ನಾಲ್ಕು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಅಭಿನಂದಿಸುವ ಜೊತೆಗೆ ಇತರೆ ಎಲ್ಲಾ ಮಕ್ಕಳನ್ನೂ ನೆನಪಿನ ಕಾಣಿಕೆ, ಶಾಲು ಹೊದಿಸಿ ಅಭಿನಂದಿಸಿದ್ದು ವಿಶೇಷ. ೧೨೫ಕ್ಕೆ ೧೨೪ ಅಂಕ ಪಡೆದ ಸಾನಿಕ ಹಾಗೂ ಅಪ್ರೀನಾ ಇವರಿಗೆ ಇದೇ ಸಂದರ್ಭದಲ್ಲಿ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ೧೫ ಮಕ್ಕಳನ್ನು ಅಭಿನಂದಿಸಿ ಮಾತನಾಡಿದ ಎಸ್.ಡಿಎಂಸಿ ಅಧ್ಯಕ್ಷ, ಪೋಷಕರು, ಮುಖ್ಯ ಶಿಕ್ಷಕರು, ಶಿಕ್ಷಕರು ಮಕ್ಕಳ ಈ ಸಾಧನೆಯನ್ನು ಕೊಂಡಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಇರುವ ಒಂದು ಪುಟ್ಟಶಾಲೆ ಹಳ್ಳಿಗಾಡಿನ ಮಕ್ಕಳು ಕೊಪ್ಪ ತಾಲೂಕಿನ ಕನ್ನಡ ಮಾಧ್ಯಮದ ೧೯ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆಯುವುದು ಎಂದರೆ ಸುಲಭದ ಮಾತಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಈ ಸಾಧನೆಯನ್ನು ಈ ಶಾಲೆ ಇಬ್ಬರು ವಿದ್ಯಾರ್ಥಿಗಳು ಮಾಡಿರುವುದು ವಿಶೇಷ. ಆರು ವರ್ಷಗಳ ಹಿಂದೆ ಮೂರು ಕೊಠಡಿಗಳಲ್ಲಿ ನಡೆಯುತ್ತಿದ್ದ ಈ ಶಾಲೆ ಇಂದು ಸಮಗ್ರ ಅಭಿವೃದ್ಧಿ ಹೊಂದಿ ಎಲ್ಲ ರೀತಿಯ ಸವಲತ್ತು ಪಡೆದಿದೆ.ಸುಸಜ್ಜಿತ ವಿಜ್ಞಾನ ಲ್ಯಾಬ್, ಉತ್ತಮ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಹೊಂದಿರುವ 3 ತರಗತಿ ಕೊಠಡಿಗಳು, ಉತ್ತಮ ಕ್ರೀಡಾಂಗಣ, ತೆರೆದ ರಂಗಮಂದಿರ, ಕಾಂಪೌಂಡ್, ಶೌಚಾಲಯ, ಸಿಸಿಟಿವಿ, ಯೂಪಿಎಸ್, ಎಲ್ಲವನ್ನು ಹೊಂದಿರುವ ಜೊತೆಗೆ ದಾನಿಗಳ ಸಹಕಾರದಿಂದ ಕಳೆದ 6 ವರ್ಷಗಳಿಂದ ಈ ಶಾಲೆ ಮಕ್ಕಳಿಗೆ ಸಮವಸ್ತ್ರ, ಶಾಲಾ ಬ್ಯಾಗ್ ಹಾಗೂ ಇನ್ನಿತರ ಎಲ್ಲಾ ರೀತಿಯ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ಕೊಡಿಸಲಾಗುತ್ತಿದೆ. ಹಾಗೆಯೇ ಉತ್ತಮ ಶೈಕ್ಷಣಿಕ ಕಾಳಜಿ ಹೊಂದಿರುವ ಶಿಕ್ಷಕ ವೃಂದ ಈ ಶಾಲೆಯಲ್ಲಿದೆ. ಶಾಲಾ ಮುಖ್ಯ ಶಿಕ್ಷಕ ಪದ್ಮನಾಭ್ ಮತ್ತು ಇನ್ನಿತರ ಸಹೋದ್ಯೋಗಿ ಮಿತ್ರರು ಶಾಲೆ ಏಳಿಗೆಗಾಗಿ ಪ್ರತಿನಿತ್ಯ ದುಡಿಯುತ್ತಿದ್ದಾರೆ. ದಾನಿಗಳ ಸಹಕಾರ ಉತ್ತಮವಾಗಿರುವುದರಿಂದ ಶಾಲೆ ಎಲ್ಲವನ್ನೂ ಪಡೆದಿದೆ. ಇದರ ಪರಿಣಾಮವೇ ಕಳೆದ ಆರು ವರ್ಷಗಳಿಂದ ಸತತವಾಗಿ ಶೇಕಡ ೧೦೦ ಫಲಿತಾಂಶ ಪಡೆಯುತ್ತಿರುವುದು. ದಾನಿಗಳ, ಶಾಸಕರ, ಸ್ಥಳೀಯ ಗ್ರಾಮಪಂಚಾಯತಿಯ, ತಾಲೂಕು, ಜಿಲ್ಲಾ ಪಂಚಾಯತಿಗಳ ಸಹಕಾರ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಭಾಷಾ ಶಿಕ್ಷಕ ಆರ್.ಡಿ.ರವೀಂದ್ರ ತಿಳಿಸಿದರು.ಎಸ್.ಡಿಎಂಸಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಪಂ ಸದಸ್ಯರಾದ ಜೇಡಿಕೆರೆ ಸತೀಶ್, ಮುಖ್ಯ ಶಿಕ್ಷಕ ಪದ್ಮನಾಭ್ ಹಾಗೂ ಎಲ್ಲಾ ಎಸ್.ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.