ಸಾರಾಂಶ
ನರಸಿಂಹರಾಜಪುರಮೆಣಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಅರ್ಹ ಮಹಿಳೆಯರು ಸ್ವ ಸಹಾಯ ಸಂಘಗಳಿಗೆ ಸೇರ್ಪಡೆಗೊಳಿಸಬೇಕು ಎಂದು ಎನ್.ಆರ್.ಎಲ್.ಎಂ ಯೋಜನೆಯ ತಾಲೂಕು ವ್ಯವಸ್ಥಾಪಕ ಸುಬ್ರಮಣ್ಯ ಕರೆ ನೀಡಿದರು.
- ಮೆಣಸೂರು ಗ್ರಾಮ ಪಂಚಾಯ್ತಿಯಲ್ಲಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮೆಣಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಅರ್ಹ ಮಹಿಳೆಯರು ಸ್ವ ಸಹಾಯ ಸಂಘಗಳಿಗೆ ಸೇರ್ಪಡೆಗೊಳಿಸಬೇಕು ಎಂದು ಎನ್.ಆರ್.ಎಲ್.ಎಂ ಯೋಜನೆಯ ತಾಲೂಕು ವ್ಯವಸ್ಥಾಪಕ ಸುಬ್ರಮಣ್ಯ ಕರೆ ನೀಡಿದರು.
ಬುಧವಾರ ತಾಲೂಕಿನ ಮೆಣಸೂರು ಗ್ರಾಪಂನಲ್ಲಿ ನಡೆದ ಮೆಣಸೂರು ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ 2024- 25 ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನುದ್ದೇಶಿಸಿ ಮಾತನಾಡಿ, ಒಕ್ಕೂಟ ಮುಂದಿನ ದಿನಗಳಲ್ಲಿ ಅನೇಕ ಗುರಿಗಳನ್ನು ಹೊಂದಿದೆ. ಒಕ್ಕೂಟದಿಂದ ದೊರೆಯುವ ಸಾಲ ಸೌಲಭ್ಯ, ಅನುದಾನಗಳನ್ನು ಸ್ವ ಸಹಾಯ ಸಂಘ ದ ಮಹಿಳೆಯರು ಇನ್ನೂ ಹೆಚ್ಚಿನದಾಗಿ ಉಪಯೋಗಿಸಿಕೊಳ್ಳಬೇಕು. ಒಕ್ಕೂಟದ ಸಭೆಗಳಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆಯಬೇಕು. ಒಕ್ಕೂಟ ಪ್ರತಿ ಆರ್ಥಿಕ ವರ್ಷದ ಆಂತರಿಕ ಮತ್ತು ಶಾಸನಬದ್ದ ಲೆಕ್ಕ ಪರಿಶೋಧನೆ ಮಾಡಿಸಿ ಪ್ರತಿ ವರ್ಷ ವಾರ್ಷಿಕ ಮಹಾಸಭೆ ಆಯೋಜನೆ ಮಾಡಿ ಒಕ್ಕೂಟದ ವಾರ್ಷಿಕ ಆದಾಯ ವೆಚ್ಚಗಳ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯುವುದಾಗಿದೆ. ಒಕ್ಕೂಟ ಬಹಳ ಚೆನ್ನಾಗಿ ನಡೆಯುತ್ತಿದ್ದು, ಸಂಘದ ಮಹಿಳೆಯರು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಮತ್ತು ಮಹಿಳಾ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಗ್ರಾಪಂನಿಂದ ದೊರೆಯುವ ಸೌಲಭ್ಯ ಪಡೆದು ಕೊಳ್ಳಿ ಎಂದರು. ಅತಿಥಿಯಾಗಿದ್ದ ವಕೀಲ ಈ.ಸಿ.ಜೋಯಿ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕಾನೂನು ಮುಖೇನ ಪರಿಹರಿಸಿಕೊಳ್ಳಬಹುದು. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಲಿಂಗ ಅಸಮಾನತೆ, ಇವೆಲ್ಲ ಸಹ ಮಹಿಳೆಯರು ಕಾನೂನ ಮುಖೇನ ತಡೆಯಬಹುದು. ಪ್ರತಿಯೊಬ್ಬರೂ ಕೂಡ ಕಾನೂನಿನ ಅರಿವು ಹೊಂದಿರಬೇಕೆಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಇಂದು ಸಮಾಜದ ಸ್ವಾಸ್ಥ ಹದಗೆಡುತ್ತಿದೆ. ಆದ್ದರಿಂದ ಇಲಾಖೆಯಿಂದ ಮಾದಕ ಮುಕ್ತ ಕರ್ನಾಟಕ ಅಭಿಯಾನದ ಮೂಲಕ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಡಯಾನಾ ಜಾರ್ಜ್ ವಹಿಸಿದ್ದರು. ಮೆಣಸೂರು ಗ್ರಾ.ಪಂ. ಸದಸ್ಯರಾದ ಡಿ.ಆರ್.ಶ್ರೀನಾಥ್,ಉಮಾ, ಎನ್.ಡಿ.ಪ್ರಸಾದ್, ಯಾಸ್ಮೀನ್, ಪಿಡಿಒ ಸಂತೋಷ್‌ಕುಮಾರ್, ಒಕ್ಕೂಟದ ಉಪಾಧ್ಯಕ್ಷೆ ರಶ್ಮಿ, ಕಾರ್ಯದರ್ಶಿ ಮೇರಿ, ಖಜಾಂಚಿ ಸಂಧ್ಯಾ, ಎನ್.ಆರ್.ಎಲ್.ಎಂ ಸಿಬ್ಬಂದಿ ಚೇತನ್, ಜಿಪಿಎಲ್‌ಎಫ್‌ನ ಪದಾಧಿಕಾರಿಗಳಿದ್ದರು.