ಕುಕನೂರು: ಅಂತರ್ಜಲ ಹೆಚ್ಚಳ ಹಾಗೂ ಸೀಮಿತ ಬಳಕೆ ಅವಶ್ಯ ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜಿ. ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ತಳಕಲ್ಲ ಗ್ರಾಮದ ತಳಕಲ್‌ನ ವಿಟಿಯು ಕ್ಯಾಂಪಸ್‌ನಲ್ಲಿ ಜಲಧರಗಳ ನಕಾಶೀಕರಣ, ಅಂತರ್ಜಲ ಸಂಬಂಧಿತ ಸಮಸ್ಯೆ ಮತ್ತು ಅಂತರ್ಜಲ ನಿರ್ವಹಣೆ ಜರುಗಿದ ಒಂದು ದಿನದ ಶ್ರೇಣಿ-III ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಜಲಧರಗಳ ನಕಾಶೀಕರಣ (ಎನ್ಎಕ್ಯೂಯುಐಎಂ) ಅಧ್ಯಯನಗಳ ವೈಜ್ಞಾನಿಕ ಫಲಿತಾಂಶ ಪ್ರಾಯೋಗಿಕ ಮಾಹಿತಿಯಾಗಿ ಪರಿವರ್ತಿಸುವುದು, ವೈಜ್ಞಾನಿಕ ಸಿದ್ಧಾಂತ ಮತ್ತು ಕ್ಷೇತ್ರ ಮಟ್ಟದ ಅನುಷ್ಠಾನದ ನಡುವಿನ ಅಂತರ ಕಡಿಮೆ ಮಾಡುವುದು ಹಾಗೂ ಕೃತಕ ಮರುಪೂರಣ ಮತ್ತು ಸಂರಕ್ಷಣೆಯ ಅರಿವು ಮೂಡಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.ವಿಟಿಯು ಸ್ನಾತಕೋತ್ತರ ಕೇಂದ್ರದ ಉಪ ನಿರ್ದೇಶಕ ಡಾ.ಬಸವರಾಜಪ್ಪ ವೈ.ಎಚ್ ಮಾತನಾಡಿ, ಇಲಾಖೆಗಳ ನಡುವಿನ ಸಮನ್ವಯ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸುಸ್ಥಿರ ಅಂತರ್ಜಲ ನಿರ್ವಹಣೆ ಸಾಧ್ಯ ಎಂದರು.
ಗದಗ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಕೆ.ಲೋಕೇಶ್ ಹಾಗೂ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ ಮುಖ್ಯಸ್ಥ ಬಸವರಾಜ ಹುಣಶ್ಯಾಳ, ಅಂತರ್ಜಲ ನಿರ್ದೇಶನಾಲಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಹಿರಿಯ ಭೂವಿಜ್ಞಾನಿ ವಿ.ಬಸವಂತ ಇತರರಿದ್ದರು.ಅಂತರ್ಜಲ ಕುರಿತು ತಂತ್ರಜ್ಞರ ವಿಷಯ ಮಂಡನೆ: ಉದ್ಘಾಟನೆ ನಂತರ ನಡೆದ ವಿವಿಧ ತಾಂತ್ರಿಕ ಗೋಷ್ಠಿಗಳಲ್ಲಿ ತಜ್ಞರು ಉಪನ್ಯಾಸ ನೀಡಿದರು. ಕರ್ನಾಟಕದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ಚಟುವಟಿಕೆಗಳ ಕುರಿತು ಜಿ.ಕೃಷ್ಣಮೂರ್ತಿ ಮಾಹಿತಿ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ಜಲಧರಗಳ ನಕಾಶೀಕರಣ ಅಧ್ಯಯನಗಳ ಕುರಿತು ವಿಜ್ಞಾನಿ ಡಾ.ಜಿ.ದವಿತುರಾಜ್, ಕೈಗಾರಿಕಾ ತ್ಯಾಜ್ಯದ ನೀರು, ಮಣ್ಣು, ಕೆಸರು ಮತ್ತು ಗಾಳಿಯ ಮಾದರಿ ಸಂಗ್ರಹಣಾ ತಂತ್ರಜ್ಞಾನಗಳು ಹಾಗೂ ಪರಿಸರ ಸಂರಕ್ಷಣೆ ಕುರಿತು ಡಾ. ಕೆ. ಲೋಕೇಶ್ ಪ್ರಾತ್ಯಕ್ಷಿಕೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಅಂತರ್ಜಲ ಅನ್ವೇಷಣೆ ಮಾಡುವ ವಿಧಾನಗಳು ಕುರಿತು ಸಹಾಯಕ ಜಲಭೂವಿಜ್ಞಾನಿ ಡಾ. ದಮೇರ ಆಂಜನೇಯುಲು, ಅಂತರ್ಜಲ ನಕ್ಷೆಗಳ ತಯಾರಿಕೆ ಮತ್ತು ಮೌಲ್ಯಮಾಪನದಲ್ಲಿ ದೂರ ಸಂವೇದಿ ಹಾಗೂ ಜಿಐಎಸ್ ತಂತ್ರಜ್ಞಾನದ ಪಾತ್ರದ ಕುರಿತು ಕಾರ್ಯಕ್ರಮ ಸಂಯೋಜಕ ಸುರೇಶ ಲಮಾಣಿ ವಿವರಣೆ ನೀಡಿದರು. ಕಾರ್ಯಾಗಾರದ ಕೊನೆಯಲ್ಲಿ ಸ್ಥಳೀಯ ಅಂತರ್ಜಲ ಸಮಸ್ಯೆ, ಸವಾಲು ಹಾಗೂ ಸಂಭಾವ್ಯ ಪರಿಹಾರೋಪಾಯಗಳ ಕುರಿತು ತರಬೇತಿದಾರರು ಮತ್ತು ಭಾಗವಹಿಸಿದವರ ನಡುವೆ ಮುಕ್ತ ಸಂವಾದ ನಡೆಯಿತು.