ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿ ಶ್ರೀಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ವತಿಯಿಂದ ಶ್ರಾವಣ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಾಲನೆ ನೀಡಿ ಮಾತನಾಡಿದ ಬಿಪಿಎಸ್‌ಸಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರಭಾಕರ ಜೋಶಿ, ಇಂದಿನ ಯುವ ಸಮುದಾಯ ಆಧುನಿಕತೆಯತ್ತ ವೇಗವಾಗಿ ಸಾಗುತ್ತಿರುವ ಸಂದರ್ಭದಲ್ಲಿ ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ. ಇಂತಹ ಸಾಂಸ್ಕೃತಿಕ ಚಟುವಟಿಕೆ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ಮೌಲ್ಯಯುತ ಜೀವನದ ಮಾರ್ಗದರ್ಶನ ನೀಡುವಂತಾಗಬೇಕು. ಕಲೆ ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜದ ಬದುಕು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಮುದ್ದಟನೂರು ಎಚ್. ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ತಲೆ-ತಲಾಂತರಗಳಿಂದ ಬೆಳೆದು ಬಂದಿರುವ ತೊಗಲುಗೊಂಬೆಯಾಟ, ಬಯಲಾಟ, ಜನಪದ ಗಾಯನ ಹಾಗೂ ದಾಸಕೀರ್ತನೆಯಂತಹ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಕಲಾವಿದರಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ದೊರೆತಲ್ಲಿ ಮಾತ್ರ ಇಂತಹ ಸಾಂಪ್ರದಾಯಿಕ ಕಲಾ ಪ್ರಕಾರಗಳು ಉಳಿದು ಮುಂದಿನ ಪೀಳಿಗೆಗೆ ತಲುಪಲು ಸಾಧ್ಯ ಎಂದರು.
ಯುವ ಮುಖಂಡ ಟಿ. ವಿನಯಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ನಿವೃತ್ತ ಕಂದಾಯ ಅಧಿಕಾರಿ ಜಿ. ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.ತಾಂಡವ ನೃತ್ಯ ಕಲಾ ಟ್ರಸ್ಟ್ ಅಧ್ಯಕ್ಷ ವಿನೋದ, ಹಿರಿಯ ಬಯಲಾಟ ಕಲಾವಿದ ಹೊನ್ನೂರಸಾಬ್ ಶಂಕರಬಂಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ದಿವ್ಯಾ ಮತ್ತು ತಂಡದಿಂದ ಜಾನಪದ ನೃತ್ಯ, ಕುಮಾರಗೌಡ ಅಮಾಪುರ ತಂಡದಿಂದ ಜನಪದ ಗಾಯನ ಹಾಗೂ ಕೆ. ಸುಧಾ ಮತ್ತು ತಂಡದಿಂದ ದಾಸಕೀರ್ತನೆ ಕಾರ್ಯಕ್ರಮಗಳು ಜರುಗಿದವು.