ತಾಲೂಕು ಕಚೇರಿ ಮುಂಭಾಗ 10 ರಂದು ಗ್ಯಾರಂಟಿ ಸಮಾವೇಶ: ಎಚ್‌.ಡಿ.ನವೀನ್ ಕುಮಾರ್‌

| Published : Feb 08 2024, 01:37 AM IST

ತಾಲೂಕು ಕಚೇರಿ ಮುಂಭಾಗ 10 ರಂದು ಗ್ಯಾರಂಟಿ ಸಮಾವೇಶ: ಎಚ್‌.ಡಿ.ನವೀನ್ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ 5 ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಫೆ.10 ರ ಶನಿವಾರ ತಾಲೂಕು ಕಚೇರಿ ಮುಂಭಾಗದ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರದ 5 ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಫೆ.10 ರ ಶನಿವಾರ ತಾಲೂಕು ಕಚೇರಿ ಮುಂಭಾಗದ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಹೇಳಿದರು.

ಬುಧವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ತಹಸೀಲ್ದಾರ್ ತನುಜಾ.ಟಿ.ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರದ 5 ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಬಹಳ ಅಚ್ಚುಕಟ್ಟಾಗಿ, ಅದ್ದೂರಿ ಯಾಗಿ ಮಾಡಲಾಗುವುದು. ಸರ್ಕಾರದ ಪ್ರೊಟೋ ಕಾಲ್‌ನಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗ್ರಾಪಂ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಿಸಲಾಗುವುದು. ಇದಕ್ಕೆ ಎಲ್ಲಾ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದೆ.

ಎಲ್ಲಾ ಫಲಾನುಭವಿಗಳು ಈ ಸಮಾವೇಶಕ್ಕೆ ಆಗಮಿಸುವಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ಇಲಾಖೆ ಯವರು ಕ್ರಮವಹಿಸಬೇಕು. 5 ಇಲಾಖೆಗಳಿಂದ ಒಂದೊಂದು ಕೌಂಟರ್‌ಗಳನ್ನು ತೆರೆದು ಅಲ್ಲಿ ಫಲಾನುಭವಿಗಳು ಸರ್ಕಾರದ ಗ್ಯಾರಂಟಿ ಯೋಜನೆ ಸವಲತ್ತುಗಳಿಂದ ವಂಚಿತರಾಗಿದ್ದವರಿಗೆ ಯೋಜನೆ ದೊರಕುವ ನಿಟ್ಟಿನಲ್ಲಿ ನೋಂದಣಿ ಅಥವಾ ತಿದ್ದುಪಡಿ ಇನ್ನಿತರೆ ಕಾರ್ಯಗಳನ್ನು ಈ ಕೌಂಟರ್‌ನಲ್ಲಿ ನಿರ್ವಹಿಸಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಈಚಿಕೆರೆ ಸುಂದರೇಶ್ ಮಾತನಾಡಿ, ಈ ಸಮಾವೇಶದಲ್ಲಿಯೇ ಶಾಸಕರ ಜನಸಂಪರ್ಕ ಸಭೆ ನಡೆಯುವುದರಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಲು ಕ್ರಮ ವಹಿಸಬೇಕು. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳಿಗೆ ಹೆಚ್ಚಿನ ಸಮಸ್ಯೆಗಳ ಅರ್ಜಿಗಳು ಬರುತ್ತವೆ. ಇದೇ ಶಾಮಿಯಾನದಡಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಬಿರ ಮಾಡಬೇಕು ಸಲಹೆ ನೀಡಿದರು.

ಪಿಎಸ್‌ಐ ನಿರಂಜನ್‌ಗೌಡ ಮಾತನಾಡಿ, ಸಮಾವೇಶಕ್ಕೆ ಎಷ್ಟು ಜನ ಬರುತ್ತಾರೆ ? ವಾಹನಗಳು ಎಷ್ಟು ಬರ ಬಹುದು ಎಂಬ ಮಾಹಿತಿ ನೀಡಿದರೆ ಬಂದೋಬಸ್ತು ಮಾಡಲು ಸಹಾಯವಾಗಲಿದೆ ಎಂದರು. ಇಒ ಎಚ್.ಡಿ. ನವೀನ್‌ಕುಮಾರ್ ಮಾತನಾಡಿ, ಈ ಸಮಾವೇಶಕ್ಕೆ ಒಂದೂವರೆ ಸಾವಿರದಿಂದ 2 ಸಾವಿರ ಫಲಾನುಭವಿಗಳು ಸೇರಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕ್ರಮವನ್ನು ದೊಡ್ಡ ಎಲ್.ಇ.ಡಿ ಪರದೆ ಮೂಲಕ ಬಿತ್ತರಿಸಲಾಗುವುದು ಎಂದರು. ಗ್ರಾಪಂ ವ್ಯಾಪ್ತಿಯ ಎಲ್ಲಾ ಸ್ವ ಸಹಾಯ ಸಂಘ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಭಾಗವಹಿಸುವಂತೆ ಕ್ರಮವಹಿಸಬೇಕೆಂದು ಎಲ್ಲಾ ಗ್ರಾಪಂ ಪಿಡಿಓಗಳಿಗೆ ಸೂಚಿಸಿದರು..

ಸಭೆ ಅಧ್ಯಕ್ಷತೆಯನ್ನು ತಹಸೀಲ್ದಾರ್ ತನುಜಾ.ಟಿ.ಸವದತ್ತಿ ವಹಿಸಿದ್ದರು.ಸಭೆಯಲ್ಲಿ ಕೆಡಿಪಿ ಸಭೆ ಸದಸ್ಯ ಸಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್‌ ಕುಮಾರ್, ಗ್ರಾಪಂ ಸದಸ್ಯರಾದ ಬಿನು, ಶಂಕರ, ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಗ್ರಾಪಂಗಳ ಪಿಡಿಒಗಳು ಉಪಸ್ಥಿತರಿದ್ದರು.