15ನೇ ಹಣಕಾಸಿನ ಅನುದಾನ ಹಂಚಿಕೆಯಾಗಿಲ್ಲ: ಭೈರೇಶ್‌ ಆರೋಪ

| Published : Feb 08 2024, 01:37 AM IST

ಸಾರಾಂಶ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಜಿಲ್ಲಾ ಪಂಚಾಯಿತಿಗೆ ಸರ್ಕಾರದಿಂದ ಬಂದ ೧೫ ನೇ ಹಣಕಾಸಿನಲ್ಲಿನ ೧೩ ಕೋಟಿ ರು.ಗಳಲ್ಲಿ ಬಿಡಿಗಾಸನ್ನು ನೀಡದೆ, ಇಡೀ ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯಕ್ಕೆ ತೀವ್ರ ಅನ್ಯಾಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಜಿಲ್ಲಾ ಪಂಚಾಯಿತಿಗೆ ಸರ್ಕಾರದಿಂದ ಬಂದ ೧೫ ನೇ ಹಣಕಾಸಿನಲ್ಲಿನ ೧೩ ಕೋಟಿ ರು.ಗಳಲ್ಲಿ ಬಿಡಿಗಾಸನ್ನು ನೀಡದೆ, ಇಡೀ ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯಕ್ಕೆ ತೀವ್ರ ಅನ್ಯಾಯ ಮಾಡಿದ್ದಾರೆ. ಈ ಕ್ರಮವನ್ನು ಖಂಡಿಸಲಾಗುತ್ತದೆ ಎಂದು ಬೇಲೂರು ಕಾಂಗ್ರೆಸ್ ಎಸ್ಸಿ ತಾಲೂಕು ಅಧ್ಯಕ್ಷ ರಾಯಪುರ ರವಿ ಮತ್ತು ಹಳೇಬೀಡು ಹೋಬಳಿ ಎಸ್ಸಿ ಘಟಕದ ಅಧ್ಯಕ್ಷ ಭೈರೇಶ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರದಿಂದ ಬಂದ ಹಣವನ್ನು ಜಿಲ್ಲಾ ಸಚಿವರು ಎಲ್ಲಾ ವರ್ಗಕ್ಕೆ ಹಂಚಿಕೆ ನಡೆಸಬೇಕಿತ್ತು. ಆದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣದ ಮೂಲಕ ತಾರತಮ್ಯ ನೀತಿಯನ್ನು ಅನುಸರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಕಾಂಗ್ರೆಸ್ ಸಂಘಟನಾ ಚತುರ ಬಿ.ಶಿವರಾಂ ಅವರನ್ನು ಏಕವಚನದಲ್ಲಿ ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಜಿಲ್ಲಾ ಉಸ್ತುವಾರಿ ಸಚಿವರು ಕನಿಷ್ಠ ಸೌಜನ್ಯಕ್ಕೆ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ನೋವು ಕೇಳಿಲ್ಲ, ಲೋಕಸಭಾ ಚುನಾವಣೆ ಹತ್ತಿರವಾದರೂ ಪಕ್ಷದ ಸಂಘಟನೆಗೆ ಒತ್ತು ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಮೂಲಕ ಲೋಕಸಭಾ ಚುನಾವಣೆಗೆ ಸನ್ನದ್ಧವಾಗಿರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಇಂತಹ ಹೇಳಿಕೆಯನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಪಕ್ಷಕ್ಕೆ ನೀಡುವ ಹೇಳಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ಪಕ್ಷದ ಹಿತದೃಷ್ಟಿಯಿಂದ ಬದಲಾವಣೆಗೆ ಮುಂದಾಗಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಭದ್ರಕೋಟೆಯ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸುಭದ್ರವಾಗಿ ಕಟ್ಟಿದ ಮಾಜಿ ಸಚಿವ ಬಿ.ಶಿವರಾಂ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಜಿಲ್ಲಾ ಉಸ್ತುವಾರಿ ಸಚಿವರಿಗಿಲ್ಲ, ೨೦೦೪ ರಲ್ಲಿಯೇ ಸಚಿವ ಸಂಪುಟದಲ್ಲಿ ಕೆಲಸ ಮಾಡಿದ ಅನುಭವವಿದೆ. ಅಲ್ಪಮತದಿಂದ ಸೋತಿದ್ದಾರೆ ಎಂಬ ಕಾರಣಕ್ಕೆ ಏಕ ವಚನದ ಹೇಳಿಕೆ ಅವರ ಘನತೆಗೆ ತರವಲ್ಲ, ಇಂತಹ ಹೇಳಿಕೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಯಾವ ಕಾರಣಕ್ಕೂ ಸಹಿಸುವ ಪ್ರಶ್ನೆ ಇಲ್ಲ ಎಂದರು.

ಬೇಲೂರು ನಗರಾಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಧರ್ಮ ಹಾಗೂ ಕಾಂತರಾಜು ಹಾಜರಿದ್ದರು.