ಮಾ.3ಕ್ಕೆ ಪಲ್ಸ್ ಪೋಲಿಯೋ ಕಾರ್ಯಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ

| Published : Feb 08 2024, 01:37 AM IST

ಸಾರಾಂಶ

ಈ ಹಿಂದೆ ಎಷ್ಟು ಬಾರಿ ಪಲ್ಸ್ ಪೋಲಿಯೋ ಲಸಿಕೆ ನೀಡಿದರೂ ಸಹ ಹೆಚ್ಚುವರಿಯಾಗಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಯಾವುದೇ ಮಕ್ಕಳು (5 ವರ್ಷದೊಳಗಿನ) ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗಬಾರದು. ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮದ ವ್ಯಾಪಕ ಪ್ರಚಾರವಾಗಬೇಕು. ಜಿಲ್ಲೆಯಲ್ಲಿರುವ ಹಳ್ಳಿಗಳಲ್ಲಿ, ಅನಕ್ಷರಸ್ಥ ಕುಟುಂಬಗಳು, ಕೂಲಿ ಕಾರ್ಮಿಕರ ಮನೆ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ತಿಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಮಾ.3ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೋಷಕರು ತಪ್ಪದೇ 0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ 2023-24 ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಚಾಲನ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಾ.3 ರಿಂದ 6 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಾರ್ಚ್ 3 ರಂದು ಆರೋಗ್ಯ ಇಲಾಖೆಯ ತೆರೆಯುವ ಲಸಿಕಾ ಬೂತ್‌ನಲ್ಲಿ ನೀಡಲಾಗುವುದು. ಮಾ.4 ರಿಂದ 6 ವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದಿರುವ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

ಈ ಹಿಂದೆ ಎಷ್ಟು ಬಾರಿ ಪಲ್ಸ್ ಪೋಲಿಯೋ ಲಸಿಕೆ ನೀಡಿದರೂ ಸಹ ಹೆಚ್ಚುವರಿಯಾಗಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಯಾವುದೇ ಮಕ್ಕಳು (5 ವರ್ಷದೊಳಗಿನ) ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗಬಾರದು. ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮದ ವ್ಯಾಪಕ ಪ್ರಚಾರವಾಗಬೇಕು.

ಜಿಲ್ಲೆಯಲ್ಲಿರುವ ಹಳ್ಳಿಗಳಲ್ಲಿ, ಅನಕ್ಷರಸ್ಥ ಕುಟುಂಬಗಳು, ಕೂಲಿ ಕಾರ್ಮಿಕರ ಮನೆ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ತಿಳಿಸಬೇಕು ಎಂದು ನುಡಿದರು.

ಹೊರ ರಾಜ್ಯದಿಂದ ಕಬ್ಬು ಕಡಿಯಲು ಬಂದಿರುವ ಕುಟುಂಬಗಳಿಗೆ ಹಾಗೂ ವಲಸೆ ಕಾರ್ಮಿಕರು ಪಲ್ಸ್ ಪೋಲಿಯೋ ಲಸಿಕೆ ನೀಡಲು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುವ ಎಲ್ಲ ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರು ಜನಸಾಮಾನ್ಯರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕೆ.ಮೋಹನ್ ಮಾತನಾಡಿ, ಕಳೆದ ಬಾರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ 1,27,563 ಮಕ್ಕಳಿಗೆ ಲಸಿಕೆ ನೀಡಿ ಶೇ 106.35 ಸಾಧನೆ ಮಾಡಲಾಗಿತ್ತು. ಮಂಡ್ಯ- 32651, ಮದ್ದೂರು-19036, ಮಳವಳ್ಳಿ- 19682, ಪಾಂಡವಪುರ-12073, ಶ್ರೀರಂಗಪಟ್ಟಣ,-11826, ಕೆ.ಆರ್ ಪೇಟೆ-17953 ಹಾಗೂ ನಾಗಮಂಗಲ-14342 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಎಂ.ಬಾಬು, ನಿವೃತ್ತ ಆರೋಗ್ಯಾಧಿಕಾರಿ ಡಾ. ಮರೀಗೌಡ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಂ.ಎನ್. ಆಶಾಲತಾ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜು, ಆರ್‌ಸಿಎಚ್ಒ ಡಾ.ಅನಿಲ್ ಕುಮಾರ್, ದಂತ ವೈದ್ಯಾಧಿಕಾರಿ ಡಾ. ಅರುಣಾನಂದ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಇತರರಿದ್ದರು.