7ರಿಂದ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ

| Published : Dec 06 2024, 09:00 AM IST

ಸಾರಾಂಶ

ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ ಡಿ.7 ಮತ್ತು ಡಿ.8ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀಮಹಾಗಣಪತಿ ಭಕ್ತಮಂಡಳಿಯ ಅಧ್ಯಕ್ಷ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ.

ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ ಡಿ.7 ಮತ್ತು ಡಿ.8ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀಮಹಾಗಣಪತಿ ಭಕ್ತಮಂಡಳಿಯ ಅಧ್ಯಕ್ಷ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ.

ಬಲಿಪಾಢ್ಯಮಿಯ ದಿನ ಸ್ಥಾಪಿಸಲಾಗುವ ಗಣೇಶಮೂರ್ತಿಗೆ ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು. ಪ್ರತಿದಿನ ರಾತ್ರಿ 9 ಕ್ಕೆ ಮಹಾಮಂಗಳಾರತಿ ನಡೆಯಲಿದೆ. 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿಸಲಿಸಿ, ವಿಸರ್ಜನೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎಂದರು.

ಡಿ.7ರಂದು ರಾತ್ರಿ ಹತ್ತು ಗಂಟೆಗೆ ವಿದ್ಯುತ್ ಅಲಂಕಾರ ಮತ್ತು ಹೂವಿನಿಂದ ಅಲಂಕೃತಗೊಂಡ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಶ್ರೀಮಹಾಗಣಪತಿ ಉತ್ಸವವನ್ನು ನಾದಸ್ವರ, ಕರಡಿಮಜಲು, ನಾಸಿಕ್ ಡೋಲ್, ಕೇರಳದ ಜಾನಪದ ನೃತ್ಯ ಕಲಾ ತಂಡದಿಂದ ಕರಡಿ ವಾದ್ಯ, ನಾಸಿಕ್ ಡೋಲ್, ಮಹಿಳಾ, ಪುರುಷ ವೀರಗಾಸೆ ತಂಡಗಳು, ಕೀಲಕುದುರೆ, ನಂದಿಕೋಲು, ನವಿಲು, ಜಿರಾಫೆ, ಕವಾಡ ನೃತ್ಯ, ಹಾಸ್ಯದ ಚಾರ್ಲಿ ನೃತ್ಯ, ವೀರಭದ್ರ ದೇವರ ಕುಣಿತ, ವೀರಗಾಸೆ, ಡೊಳ್ಳು, ಪೂಜಾ ಕುಣಿತದ ಪ್ರದರ್ಶನದೊಂದಿಗೆ ಗೂಳೂರಿನ ಪ್ರಮುಖ ರಾಜಬೀದಿಗಳಲ್ಲಿ ಗಣಪತಿಯ ಉತ್ಸವ ನಡೆಯಲಿದೆ ಎಂದರು.

ವಿಶೇಷ ಆಕರ್ಷಣೆಯಾಗಿ ಗೂಳೂರಿನ ಪಾರ್ಥಸಾರಥಿ ಅವರಿಂದ ಚಿತ್ರದುರ್ಗದ ಮದಕರಿ ನಾಯಕನ ವೇಷ ಹಾಗೂ ಕುಮಟನಾಯಕ ಅವರ ಕುಟುಂಬದಿಂದ ಪಾಳೇಗಾರರ ವೇಷದ ಪ್ರದರ್ಶನ ನಡೆಯಲಿದೆ. ಡಿ.8ರಂದು ಮಧ್ಯಾಹ್ನದಿಂದ ಗ್ರಾಮದ ಮಧ್ಯಭಾಗದಿಂದ ಶ್ರೀಮಹಾಗಣಪತಿಯ ಉತ್ಸವ ಆರಂಭಗೊಂಡು ಸಂಜೆ ಐದು ಗಂಟೆವರೆಗೆ ಗ್ರಾಮದಲ್ಲಿ ಮರೆವಣಿಗೆ ನಡೆಸಿ, ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಗುವುದು. ವಿಸರ್ಜನೆ ವೇಳೆ ನುರಿತ ಸಿಡಿಮದ್ದು ಸಿಡಿಸುವ ಕೆಲಸಗಾರರಿಂದ 500 ಅಡಿ ಉದ್ದದ ಜೋಗ್ ಪಾಲ್ಸ್, ನೂರು ಬಾರಿ ಒಡೆಯುವ ಔಟ್ಸ್ ಹಾಗೂ ಪ್ಯಾರಚೂಟ್ ಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಗೂಳೂರು ಶಿವಕುಮಾರ್ ಮನವಿ ಮಾಡಿದ್ದಾರೆ.