ಗುತ್ತಲ ನಿಲ್ದಾಣದ ಶೌಚಾಲಯ ಬಂದ್‌: ಪ್ರಯಾಣಿಕರ ಪರದಾಟ

| Published : Apr 21 2024, 02:17 AM IST

ಗುತ್ತಲ ನಿಲ್ದಾಣದ ಶೌಚಾಲಯ ಬಂದ್‌: ಪ್ರಯಾಣಿಕರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಗುತ್ತಲ ಬಸ್ ನಿಲ್ದಾಣದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದು, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಂಜುನಾಥ ಯರವಿನತಲಿ

ಕನ್ನಡಪ್ರಭ ವಾರ್ತೆ ಗುತ್ತಲ

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ, ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಪ್ರಯಾಣಿಕರ ಪರದಾಟ ಹೇಳತೀರದಾಗಿದೆ. ಅದರಲ್ಲೂ ನಾಲ್ಕೈದು ದಿನಗಳಿಂದ ಮಹಿಳಾ ಶೌಚಾಲಯಕ್ಕೆ ಬೀಗ ಜಡಿದಿದ್ದು, ಪ್ರಯಾಣಿಕರು ಮಲ, ಮೂತ್ರ ವಿಸರ್ಜನೆಗೆ ಪರದಾಡುವದನ್ನು ಕಂಡು ಇತರ ಪ್ರಯಾಣಿಕರು, ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹಾವೇರಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಜನರು ಪ್ರಯಾಣ ಮಾಡುವ ಬಸ್ ನಿಲ್ದಾಣ ಇದಾಗಿದೆ. ಹಾವೇರಿ, ಗದಗ, ವಿಜಯನಗರ, ಬಳ್ಳಾರಿ, ಉತ್ತರಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು ನೂರಕ್ಕೂ ಅಧಿಕ ಬಸ್‌ಗಳ ಓಡಾಟವಿರುವ ಗುತ್ತಲ ಬಸ್ ನಿಲ್ದಾಣದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದು, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ. ನಾಣ್ಯಗಳನ್ನು ಬಳಸಿ ಉಪಯೋಗಿಸಲು ನಿರ್ಮಿಸಿದ್ದ ಘಟಕ ಸ್ಥಗಿತವಾಗಿ 4-5 ತಿಂಗಳು ಕಳೆದರೂ ದುರಸ್ತಿಯಾಗದೇ ಸರ್ಕಾರದ ಹಣ ದುರಪಯೋಗವಾಗಿದೆ. ಬೇಸಿಗೆಯಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದ್ದು ಪ್ರಯಾಣಿಕರು ನೀರಿಗೆ ಹೋಟೆಲ್, ಬೇಕರಿಗಳಲ್ಲಿನ ಬಾಟಲ್‌ ನೀರಿಗೆ ಮೊರೆ ಹೋಗುವ ಸನ್ನಿವೇಶ ಎದುರಾಗಿದೆ. ಬಸ್ ನಿಲ್ದಾಣದಲ್ಲಿ ಆರ್‌ಎಸ್‌ಎಸ್‌(ರಾಷ್ಟ್ರೀಯ ಸ್ವಯಂ ಸೇವಕ)ನ ಯುವಕರು ಪ್ರಯಾಣಿಕರ ಅನುಕೂಲಕ್ಕಾಗಿ ಉಚಿತವಾಗಿ ಮಡಕೆಯಲ್ಲಿ ಶುದ್ದ ಕುಡಿಯುವ ನೀರನ್ನು ನೀಡುತ್ತಿದ್ದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ.

ಮುಚ್ಚಿರುವ ಮಹಿಳಾ ವಿಶ್ರಾಂತಿ ಕೊಠಡಿ

ತಾಯಂದಿರು ಮಕ್ಕಳಿಗೆ ಹಾಲುಣಿಸಲು ಸೇರಿದಂತೆ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ವಿಶ್ರಾಂತಿ ಪಡೆಯಲು ನಿರ್ಮಿಸಿರುವ ಕೊಠಡಿಗೆ ಬೀಗ ಹಾಕಿದ್ದು, ಮಹಿಳೆಯರು ಹೊರಗಡೆಯೆ ಕುಳಿತು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರತಿನಿತ್ಯ ಹಾವೇರಿ, ರಾಣಿಬೆನ್ನೂರಗಳಿಗೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಪೋಲಿ ಹುಡಗರ ಕಾಟವನ್ನು ತಾಳಲಾಗದೇ, ಮನೆಯಲ್ಲಿಯೂ ತಿಳಿಸದೇ ಪುಂಡರ ಛೇಷ್ಟೆಗಳನ್ನು ಸಹಿಸಿಕೊಂಡು ತಲೆ ತಗ್ಗಿಸಿ ಕೂರುವಂತಾಗಿದೆ.

ಕುಡುಕರ ಹಾವಳಿಪ್ರಯಾಣಿಕರು ನಿಲ್ದಾಣದಲ್ಲಿ ಕುಳಿತರೆ ಕುಡಿದ ಮತ್ತಿನಲ್ಲಿ ಬರುವ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಹಿಳೆಯರ, ವಿದ್ಯಾರ್ಥಿನಿಯರ ಬಳಿ ಕುಳಿತುಕೊಳ್ಳುವುದು, ಎಲ್ಲೆಂದರಲ್ಲಿ ಮಲಗುವದರಿಂದ ಮಹಿಳೆಯರು ನಿಲ್ದಾಣದಿಂದ ಹೊರಗೆ ಬಿಸಿಲಿನಲ್ಲಿ ನಿಲ್ಲುವಂತಾಗಿದೆ.

ಶೌಚಾಲಯಕ್ಕೆ ಬೀಗ ಮಹಿಳೆಯರ ಪರದಾಟ

ಸುಮಾರು 4-5 ದಿನಗಳಿಂದ ನೀರಿನ ನೆಪವೊಡ್ಡಿ ಮಹಿಳಾ ಶೌಚಾಲಯಗಳಿಗೆ ಬೀಗ ಹಾಕಿರುವದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಪರದಾಡುವಂತಾಗಿದೆ. ಚಿಕ್ಕಮಕ್ಕಳು ಹಾಗೂ ಕೆಲ ಪುರುಷರು ಬಸ್ ನಿಲ್ದಾಣದಲ್ಲಿಯೇ ಬಯಲು ಬರ್ಹಿದೆಸೆಗೆ ಮುಂದಾಗಿರುವದು ನಾಚಿಕೆಗೇಡಿನ ಸಂಗತಿಯಾಗಿದೆ. ಅದರಲ್ಲೂ ದೂರದ ಊರಿನಿಂದ ಬಂದ ಮಹಿಳಾ ಪ್ರಯಾಣಿಕರು ಶೌಚಾಲಯವಿಲ್ಲದೇ ಎದುರಿಸುವ ಸಮಸ್ಯೆ ದೇವರೆ ಬಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿ ವರೆಗೂ ಪರ್ಯಾಯವಾಗಿ ಶೌಚಾಲಯಕ್ಕೆ ನೀರು ಸರಬರಾಜು ಮಾಡದೇ ಮಹಿಳೆಯರೇ ಹಿಡಿಶಾಪಕ್ಕೆ ಕಾರಣರಾಗಿದ್ದಾರೆ.

ಒಟ್ಟಿನಲ್ಲಿ ಗುತ್ತಲ ಪಟ್ಟಣದ ಬಸ್ ನಿಲ್ದಾಣ ಸಮಸ್ಯೆಗಳ ಆಗರವಾಗಿದೆ, ಕೇವಲ ಒಬ್ಬ ಅದರಲ್ಲೂ ಪಾರ್ಶ್ವವಾಯುವಿನಿಂದ ಬಳಲುವ ಸಾರಿಗೆ ನಿಯಂತ್ರಕರನ್ನು ನಿಯೋಜಿಸಿದ್ದು ಇರುವದರಲ್ಲಿಯೇ ಕೆಲಸ ನಿಭಾಯಿಸುತ್ತಿದ್ದು, ಹೆಚ್ಚಿನ ಸಾರಿಗೆ ನಿಯಂತ್ರಕರನ್ನು, ಭದ್ರತಾ ಸಿಬ್ಬಂದಿಯವರನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳು ನಿಯೋಜನೆ ಮಾಡುವ ಮೂಲಕ ವಿವಿಧ ಸಮಸ್ಯೆಗೆ ಮುಕ್ತಿ ನೀಡುತ್ತಾರೆಯೆ ಎಂದು ಸಾರ್ವಜನಿಕರು ಕಾಯುವಂತಾಗಿದೆ.

ನಮ್ಮ ಪರಿಸ್ಥಿತಿ ದೇವರಿಗೆ ಗೊತ್ತ

ಎನ್ರೀ ಇಸ್ಟ ದೊಡ್ಡ ಊರು ಅಂತಾರ ಎನ್ ಮಾಡ್ಬೇಕ ತಗೊಂಡ? ಹೆಣ್ಮಕ್ಕಳು ದೂರದ ಊರಿಂದ ಬಂದೊರ ಮಲ, ಮೂತ್ರ ಮಾಡಾಕ ಹೊಂಟ್ರ ಪಾಯಕಾನಿ ಕದ ಹಾಕಿದ್ರ ಎಲ್ಲಿ ಹೋಗ್ಬೆಕು. ಅದ್ರಾಗ ಬ್ಯಾರೆ ಶುಗರ್ (ಮಧುಮೇಹ) ಪೇಶೆಂಟ್ ನಮ್ಮ ಪರಿಸ್ಥಿತಿ ದೇವರಿಗೆ ಗೊತ್ತ. ಬಯಲು ವಿಸರ್ಜನೆ ಹೋಗಾಕ ಅಸಹ್ಯ ಅನಿಸ್ತೇತ್ರಿ.

ಜಯಮ್ಮ ಹಡಗಲಿಪ್ರಯಾಣಿಕರು

ಶೀಘ್ರ ಸಮಸ್ಯೆ ಪರಿಹಾರ

ಬಸ್ ನಿಲ್ದಾಣದಲ್ಲಿನ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆದಷ್ಟು ಬೇಗನೆ ನೀರಿನ ಸಮಸ್ಯೆ ಸರಿಪಡಿಸುವ ಬಗ್ಗೆ ಹೇಳಿದ್ದಾರೆ.

ಮಂಜುನಾಥ ಸ್ವಾದಿ ಸಾರಿಗೆ ನಿಯಂತ್ರಕ ಗುತ್ತಲ