ರಾಜ್ಯದಲ್ಲಿ ತಾಲಿಬಾನ್‌ ಸಂಸ್ಕೃತಿ: ಯತ್ನಾಳ

| Published : Apr 21 2024, 02:17 AM IST

ರಾಜ್ಯದಲ್ಲಿ ತಾಲಿಬಾನ್‌ ಸಂಸ್ಕೃತಿ: ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ದೇಶವೇ ಬೆಚ್ಚಿ ಬೀಳುವ ಘಟನೆ ನಡೆದರೂ ಮುಖ್ಯಮಂತ್ರಿ ಮತ್ತು ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ.

ಹುಬ್ಬಳ್ಳಿ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ತಾಲಿಬಾನ್‌ ಸಂಸ್ಕೃತಿ ಬೆಳೆಸಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರು ಶೀಘ್ರವೇ ಸಮಗ್ರ ವರದಿ ಸಿದ್ಧಪಡಿಸಿ ರಾಷ್ಟ್ರಪತಿಗೆ ಸಲ್ಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ದೇಶವೇ ಬೆಚ್ಚಿ ಬೀಳುವ ಘಟನೆ ನಡೆದರೂ ಮುಖ್ಯಮಂತ್ರಿ ಮತ್ತು ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದರ ಪರಿಣಾಮದಿಂದ ರಾಜ್ಯದಲ್ಲಿ 48 ಗಂಟೆ ಅವಧಿಯಲ್ಲಿ 8 ಕೊಲೆ ನಡೆದಿವೆ. ಪೊಲೀಸರ, ಸರ್ಕಾರದ ಭಯವೇ ಇಲ್ಲದಂತಾಗಿದೆ. ಹೀಗಾಗಿ ರಾಜ್ಯಪಾಲರು ಎಲ್ಲ ಘಟನಾವಳಿಗಳ ಬಗ್ಗೆ ಮಾಹಿತಿ ತರಿಸಿಕೊಂಡು ವರದಿ ಸಿದ್ಧಪಡಿಸಿ ರಾಷ್ಟ್ರಪತಿಗೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿಯಾಗುವ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ತಿಪ್ಪಣ್ಣ ಮಜ್ಜಗಿ, ಬಸವರಾಜ ಕುಂದಗೋಳಮಠ, ಗುರು ಪಾಟೀಲ ಸೇರಿದಂತೆ ಹಲವರಿದ್ದರು.

ದಿಂಗಾಲೇಶ್ವರ ಶ್ರೀಗೆ ಪೇಮೆಂಟ್ ಬಂದಿದೆ!

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿರಹಟ್ಟಿ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಗೆ ಕೆಲವರಿಂದ ಪೇಮೆಂಟ್ ಬಂದಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಯಾರು ಪೇಮೆಂಟ್ ಕೊಟ್ಟಿದ್ದಾರೆ ಎಂಬುದನ್ನು ಮೇ 7ರ ನಂತರ ಬಹಿರಂಗಪಡಿಸುವೆ ಎಂದು ಬಿಜೆಪಿ ಶಾಸಕ ಬಸವಗೌಡ ಪಾಟೀಲ್‌ ಯತ್ನಾಳ ಗಂಭೀರ ಆರೋಪ ಮಾಡಿದರು.ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ವಿಚಾರ ಬಂದಾಗ ಲಿಂಗಾಯತರು, ವೀರಶೈವ ಲಿಂಗಾಯತರು ಬಿಜೆಪಿ ಜತೆಗೆ ನಿಲ್ಲುತ್ತಾರೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ನಮಗೆ, ನಮ್ಮ ಅಭ್ಯರ್ಥಿಗೆ ಯಾವುದೇ ಸಮಸ್ಯೆಯಿಲ್ಲ. ಅವರು ದಿಂಗಾಲೇಶ್ವರ ಶ್ರೀ ಅಲ್ಲ, ದಂಗಾಲೇಶ್ವರ ಶ್ರೀ ಎಂದು ವ್ಯಂಗ್ಯವಾಡಿದರು.

ಹಿಂದೆ ಮಾತೆ ಮಹಾದೇವಿ ಅವರು ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅವರಿಗೆ ಎಷ್ಟು ಮತ ಬಂದವು ಎಂಬುದು ಎಲ್ಲರಿಗೂ ಗೊತ್ತು. ದಿಂಗಾಲೇಶ್ವರ ಸ್ವಾಮೀಜಿಗೂ 5000 ಮತ ಬೀಳಬಹುದಷ್ಟೇ ಎಂದರು.

ಶಿವಮೊಗ್ಗದಲ್ಲಿ ಮೂವರು ಹಿರಿಯರು:

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಲ್ಲಿ ಮೂವರು ಹಿರಿಯ ನಾಯಕರಿದ್ದಾರೆ. ಅಷ್ಟೊಂದು ದೂರ ಕಾಲು ಚಾಚುವಂಥ ವ್ಯಕ್ತಿ ನಾನಲ್ಲ ಎನ್ನುವ ಮೂಲಕ ಪುನಃ ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಈಶ್ವರಪ್ಪ ಸ್ಪರ್ಧೆ ಕುರಿತು ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಅಲ್ಲಿನ ಚುನಾವಣೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.