ಸಾರಾಂಶ
ಚುನಾವಣಾ ಪೂರ್ವದಲ್ಲಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರು. ಕೊಡುವುದಾಗಿ ಭರವಸೆ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ರೈತರ ಕೈಗೆ ಚೊಂಬು ಕೊಟ್ಟಿದೆ
ಕನ್ನಡಪ್ರಭ ವಾರ್ತೆ ತಿಪಟೂರು
ಚುನಾವಣಾ ಪೂರ್ವದಲ್ಲಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರು. ಕೊಡುವುದಾಗಿ ಭರವಸೆ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ರೈತರ ಕೈಗೆ ಚೊಂಬು ಕೊಟ್ಟಿದೆ. ಮಾತಿಗೆ ತಪ್ಪುವ ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಎರಡು- ಮೂರು ವರ್ಷಗಳಿಂದಲೂ ಕೊಬ್ಬರಿ ಬೆಲೆ ಇಳಿಕೆಯಾಗುತ್ತಿದೆ. ಆದ್ದರಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಬೆಂಬಲ ಬೆಲೆಯೊಂದಿಗೆ ನಫೆಡ್ ಮೂಲಕ ಕೊಬ್ಬರಿ ಕೊಂಡುಕೊಳ್ಳುವಂತೆ ಮನವಿ ಸಲ್ಲಿಸಿದರು. ಆಗ ಮೋದಿ ಮರು ದಿನವೇ ಕ್ವಿಂಟಾಲ್ ಕೊಬ್ಬರಿಗೆ 12 ಸಾವಿರ ರು. ಬೆಂಬಲ ಬೆಲೆಯೊಂದಿಗೆ ನಫೆಡ್‌ಗೆ ಚಾಲನೆ ನೀಡಿದ್ದರು ಎಂದರು.ರಾಜ್ಯ ಸರ್ಕಾರ ಚುನಾವಣೆಯಲ್ಲಿ ಆರನೇ ಗ್ಯಾರಂಟಿಯಾಗಿ ಕ್ವಿಂಟಾಲ್ ಕೊಬ್ಬರಿಗೆ 15ಸಾವಿರ ರು. ಘೋಷಣೆ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಈಡೇರಿಸಲಿಲ್ಲ. ನಂತರ ರೈತರ ಪ್ರತಿಭಟನೆ, ಧರಣಿಗೆ ಮಾಡಿದಾಗ ರಾಜ್ಯ ಸರ್ಕಾರ 1500 ರು. ಪ್ರೋತ್ಸಾಹ ಧನ ನೀಡಿತು. ನಫೆಡ್‌ನಲ್ಲಿ ಕ್ವಿಂಟಾಲ್ ಕೊಬ್ಬರಿಗೆ 13500 ರು.ಗೆ ರೈತರು ಮಾರಾಟ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ 1500 ರು. ಪ್ರೋತ್ಸಾಹ ಧನ ರೈತನ ಖಾತೆಗೆ ಬಂದಿಲ್ಲ. ಕೇಂದ್ರದ 12ಸಾವಿರ ರೂ ಮಾತ್ರ ಖಾತೆಗೆ ಜಮಾ ಆಗುತ್ತಿದೆ. ಇಲ್ಲಿಯೂ ಸಹ ರೈತರಿಗೆ ವಂಚನೆ ಮಾಡುತ್ತಿದ್ದು ಕೊಟ್ಟ ಮಾತನ್ನು ರಾಜ್ಯ ಸರ್ಕಾರ ಮರೆಯುತ್ತಿದೆ ಎಂದು ಹೇಳಿದರು.
ಜನರ ತೆರಿಗೆ ಹಣವನ್ನೆಲ್ಲಾ ಗ್ಯಾರಂಟಿಗೆ ಬಳಸಿಕೊಂಡು ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಾ ಜನರನ್ನು ಸಾಲದ ಸುಳಿಗೆ ನೂಕುತ್ತಿದೆ. ಜೆಡಿಎಸ್ ರೈತರ ಕಷ್ಟಗಳನ್ನು ಕಡಿಮೆ ಮಾಡಲೆಂದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಕೃಷಿ ಮಂತ್ರಿಯಾದರೆ ಹಲವು ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣರನ್ನು ಗೆಲ್ಲಿಸಬೇಕು ಎಂದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು 2.5 ಲಕ್ಷ ಕೋಟಿ ರು. ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದೆ. ಆದ್ದರಿಂದ ಇಂತಹ ಸರ್ಕಾರದ ಅವಶ್ಯಕತೆ ನಮಗಿಲ್ಲ. ಈ ಬಾರಿ ಮೋದಿ ಸರ್ಕಾರ ಬರಲಿದ್ದು ಜನರು ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣನವರಿಗೆ ಮತಹಾಕುವ ಮೂಲಕ ಬಹುಮತಗಳ ಅಂತರಿಂದ ಗೆಲ್ಲಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಮುಖಂಡರುಗಳಾದ ಶಿವಶಂಕರ್ ಹಿಂಡಿಸ್ಕೆರೆ, ಉಮಾಮಹೇಶ್, ವಿಜಯಕುಮಾರ್, ಮಹದೇವಯ್ಯ, ಸಿದ್ದರಾಮಣ್ಣ, ಶಾಂತಣ್ಣ, ಬಸ್ತಿಹಳ್ಳಿ ರಾಜಣ್ಣ ಇತರರಿದ್ದರು.